ಇಂಚ ಆಂಡ ಎಂಚ ಮರ್ರೆ!: ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿರುವ KFCಯಲ್ಲಿ ಕೊಳೆತ ಮಾಂಸ ಪತ್ತೆ: ದುರ್ವಾಸನೆಯ ಚಿಕನ್ ಪೆರಿ ಪೆರಿ
ಮಂಗಳೂರು: ನೆಮ್ಮದಿಡ್ ವನಸ್ ಮನ್ಪೆರೆ ಕುಡ್ಲ ಬೆಸ್ಟ್ ಮರ್ರೆ ಪಂದ್ ಪನ್ಪಿನ ಕುಡ್ಲಡೇ ಇಂಚ ಆಂಡ ಎಂಚ ಮರ್ರೆ… ಅಂತ ಮಂಗಳೂರಿಗರು ಮೂಗಿನ ಮೇಲೆ ಬೆರಳಿಡುವಂತಹ ಘಟನೆಯೊಂದ ನಡೆದಿದೆ. ನಗರದ ಖ್ಯಾತ ಸಿಟಿ ಸೆಂಟರ್ ಮಾಲ್‌ನಲ್ಲಿರುವ KFC (ಕೆಎಫ್‌ಸಿ) ಔಟ್‌ಲೆಟ್ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಕಳಪೆ ಮಟ್ಟದ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಪತ್ತೆಹಚ್ಚಿ ಔಟ್‌ಲೆಟ್ ಅನ್ನು ತಕ್ಷಣವೇ ಬಂದ್ ಮಾಡಿಸಿದ್ದಾರೆ.
ವರದಿಗಳ ಪ್ರಕಾರ, ಗ್ರಾಹಕರೊಬ್ಬರು ಈ ಕೆಎಫ್ ಸಿ ಔಟ್ ಲೆಟ್ ನಿಂದ ‘ಚಿಕನ್ ಪೆರಿ ಪೆರಿ’ ಆರ್ಡರ್ ಮಾಡಿದ್ದರು. ಆದರೆ, ತರಿಸಿದ ಆಹಾರದಿಂದ ವಿಪರೀತ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಹಕರು ಕೂಡಲೇ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಮಾಲ್ ನಲ್ಲಿರುವ ಮಳಿಗೆಯ ಮೇಲೆ ದಾಳಿ ನಡೆಸಿದ್ದಾರೆ.
ಪರಿಶೀಲನೆ ನಡೆಸಿದ ವೇಳೆ ಸ್ಟೋರೇಜ್ ರೂಮ್ ನಲ್ಲಿ ಸುಮಾರು 4 ರಿಂದ 8 ತಿಂಗಳಷ್ಟು ಹಳೆಯದಾದ ಮಾಂಸವನ್ನು ದಾಸ್ತಾನು ಇಟ್ಟಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಸ್ಟೋರೇಜ್ ಪ್ರವೇಶಿಸುತ್ತಿದ್ದಂತೆಯೇ ಗಬ್ಬು ವಾಸನೆ ಬಂದಿದೆ. ಈ ಮಳಿಗೆಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿತ್ತು ಎನ್ನಲಾಗಿದೆ.
ಮಳಿಗೆಯಲ್ಲಿ ಕಳೆದ 3 ದಿನಗಳಿಂದ ಒಂದೇ ಎಣ್ಣೆಯನ್ನು ಪದೇ ಪದೇ ಕರಿಯಲು ಬಳಸಲಾಗುತ್ತಿತ್ತು. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ್ದನ್ನು ಕಂಡ ಅಧಿಕಾರಿಗಳು ಅಲ್ಲಿದ್ದ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಳಿಗೆಯನ್ನು ತಕ್ಷಣವೇ ಬಂದ್ ಮಾಡಿಸಿದ್ದಾರೆ.
ಪತ್ತೆಯಾದ ಕೋಳಿ ಮಾಂಸ ಮತ್ತು ಬಳಸಿದ ಎಣ್ಣೆಯ ಮಾದರಿಗಳನ್ನು (ಸ್ಯಾಂಪಲ್) ಸಂಗ್ರಹಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಮೈಸೂರಿನ ಆಹಾರ ಸಂಶೋಧನಾ ಪ್ರಯೋಗಾಲಯಕ್ಕೆ (Lab) ಕಳುಹಿಸಿಕೊಡಲಾಗಿದೆ. ಲ್ಯಾಬ್ ನಿಂದ ಅಂತಿಮ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























