ಭಾರತ 'ಮಹಾಶಕ್ತಿ' ಅಲ್ಲ, ವಿಶ್ವಗುರು: ಕೆನಡಾದ ಟೊರೊಂಟೊದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ - Mahanayaka

ಭಾರತ ‘ಮಹಾಶಕ್ತಿ’ ಅಲ್ಲ, ವಿಶ್ವಗುರು: ಕೆನಡಾದ ಟೊರೊಂಟೊದಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

mohan bhagavat.jpg
31/08/2026

ಟೊರೊಂಟೊ: ಭಾರತವು ಮಹತ್ತ್ವಾಕಾಂಕ್ಷೆಯ ‘ಮಹಾಶಕ್ತಿ’ (Superpower) ಆಗುವ ಮೂಲಕ ಅಲ್ಲ, ಬದಲಿಗೆ ಮಾನವ ಕುಲಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ‘ವಿಶ್ವಗುರು’ ಆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ಕೆನಡಾದ ಟೊರೊಂಟೊದಲ್ಲಿ ನಡೆದ “ಹಿಂದೂ ವಿಶ್ವ ಬಂಧು — ಸ್ನೇಹದಲ್ಲಿ ಜಗತ್ತನ್ನು ಅಪ್ಪಿಕೊಳ್ಳಿ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ನಾಗರಿಕತೆಯ ಡಿಎನ್ ಎ (DNA) ಸಾರ್ವತ್ರಿಕ ಸ್ನೇಹ, ಆಶ್ರಯ ಮತ್ತು ವೈವಿಧ್ಯತೆಗೆ ಗೌರವ ನೀಡುವುದರಲ್ಲಿ ಬೇರೂರಿದೆ ಎಂದು ಅವರು ಬಣ್ಣಿಸಿದರು.

“ಯಾರಾದರೂ ಭಾರತವನ್ನು ಮಹಾಶಕ್ತಿ ಎಂದು ಕರೆಯಬಹುದು, ಆದರೆ ಅದು ಆ ಉದ್ದೇಶದಿಂದ ಬೆಳೆದಿದ್ದಲ್ಲ. ಭಾರತವು ಜಗತ್ತಿಗೆ ಸೇವೆ ಸಲ್ಲಿಸುವ ಮೂಲಕ ತನ್ನ ಸ್ವಂತ ಗುಣಲಕ್ಷಣದಿಂದ ‘ವಿಶ್ವಗುರು’ವಾಯಿತು ಹೊರತು ಮಹಾಶಕ್ತಿ ಆಗುವುದಕ್ಕಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಅಂತರರಾಷ್ಟ್ರೀಯ ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಭಾರತವು ಯಾವಾಗಲೂ ಮುಂಚೂಣಿಯಲ್ಲಿದೆ ಎಂಬುದನ್ನು ಸ್ಮರಿಸಿದ ಅವರು, ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲಿಷ್ ನಿರಾಶ್ರಿತರಿಗೆ ಜಾಮ್ನಗರದ ಮಹಾರಾಜರು ಆಶ್ರಯ ನೀಡಿದ್ದನ್ನು ನೆನಪಿಸಿದರು.

ಮಧ್ಯಪ್ರಾಚ್ಯದ (Middle East) ಯುದ್ಧದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಮಾತ್ರವಲ್ಲದೆ, ಇತರ ಏಳು ದೇಶಗಳ ಪ್ರಜೆಗಳನ್ನೂ ಭಾರತೀಯ ಸೈನ್ಯದ ವಿಮಾನಗಳು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದ್ದವು ಎಂಬುದನ್ನು ಉಲ್ಲೇಖಿಸಿದರು.
ನಮ್ಮ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾ ವರೆಗೆ ಪ್ರಯಾಣಿಸಿದರು, ಕಾಲ್ನಡಿಯಲ್ಲಿ ಹಿಮಾಲಯವನ್ನು ದಾಟಿದರು ಮತ್ತು ಸಣ್ಣ ದೋಣಿಗಳ ಮೂಲಕ ದಕ್ಷಿಣ ಏಷ್ಯಾಕ್ಕೆ ತೆರಳಿದರು. ಆದರೆ ಅವರು ಯಾವುದೇ ದೇಶದ ಮೇಲೆ ದಬ್ಬಾಳಿಕೆ ನಡೆಸಲಿಲ್ಲ. ಬದಲಿಗೆ ಜ್ಞಾನ, ಖಗೋಳಶಾಸ್ತ್ರ, ಆಯುರ್ವೇದ ಮತ್ತು ನಾಗರಿಕತೆಯ ಮೌಲ್ಯಗಳನ್ನು ಜಗತ್ತಿಗೆ ನೀಡಿದರು ಎಂದರು.

“ವೈವಿಧ್ಯತೆಯು ನೈಸರ್ಗಿಕವಾಗಿದ್ದು, ಏಕತೆಯೇ ಅಂತಿಮ ಸತ್ಯವಾಗಿದೆ. ಭಾರತದ ಪ್ರಾಚೀನ ಸಿದ್ಧಾಂತವು ಇಡೀ ಭೂಮಿಯೇ ಒಂದು ಕುಟುಂಬ (‘ವಸುಧೈವ ಕುಟುಂಬಕಂ’) ಎಂಬ ತತ್ವವನ್ನು ನಂಬುತ್ತದೆ. ಎಲ್ಲರೂ ಮೂಲತಃ ಒಂದೇ ಆಗಿರುವುದರಿಂದ ಇತರರಿಗೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ಮೋಹನ್ ಭಾಗವತ್ ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi