ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಈಶ್ವರಪ್ಪ ಸಿದ್ಧತೆ? | ಅಷ್ಟಕ್ಕೂ ಬಿಜೆಪಿಯೊಳಗೆ ನಡೆಯುತ್ತಿರುವುದೇನು ಗೊತ್ತಾ? - Mahanayaka
3:14 AM Thursday 7 - November 2024

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಈಶ್ವರಪ್ಪ ಸಿದ್ಧತೆ? | ಅಷ್ಟಕ್ಕೂ ಬಿಜೆಪಿಯೊಳಗೆ ನಡೆಯುತ್ತಿರುವುದೇನು ಗೊತ್ತಾ?

yediyurappa
01/04/2021

ಬೆಂಗಳೂರು: ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ವರಿಷ್ಠರಿಗೆ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ  ಇದೀಗ  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಿಎಂ ಯಡಿಯೂರಪ್ಪ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದರು. ಆದರೆ ಈ ಆರೋಪಗಳ ಹಿಂದೆ ಇನ್ನೊಂದು ಬಲವಾದ ಕಾರಣವಿದೆ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ವೇದಿಕೆಯೊಂದು ಸಿದ್ಧವಾಗಿದ್ದು, ಯಡಿಯೂರಪ್ಪನವರ ಮೇಲಿನ ಆರೋಪವು ಸಿಎಂ ಕುರ್ಚಿ ಬೀಳಿಸಲು  ಇಟ್ಟ ಮುಹೂರ್ತ ಎಂದು ಹೇಳಲಾಗಿದೆ.

ಬಿಎಸ್ ವೈ ಹಠವೋ, ಬಿಜೆಪಿ ಬಚಾವೋ ಎನ್ನುವ ಅಭಿಯಾನಕ್ಕೆ ಬಿಜೆಪಿಯಲ್ಲಿರುವ ಸಂಘ ಪರಿವಾರ ನೇತೃತ್ವದ ತಂಡ ಚಾಲನೆ ನೀಡಿದೆ ಎಂದು ಹೇಳಲಾಗುತ್ತಿದೆ.  ಮೇ 2ರಂದು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಹಾಗೂ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶದಲ್ಲಿ ಸ್ವಲ್ಪ  ಏರುಪೇರಾದರೂ ಬಿಎಸ್‍ ವೈ ಅವರ ಕುರ್ಚಿಗೆ ಕಂಟಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಮೇ ತಿಂಗಳಿನಲ್ಲಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಆಗಾಗ ಹೇಳಿಕೆ ನೀಡುತ್ತಿರುತ್ತಾರೆ. ಇವರ ಹೇಳಿಕೆಯಲ್ಲಿ ಸತ್ಯಾಂಶ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ನಿರಂತರ ಪ್ರಹಾರ ಮಾಡುತ್ತಿದ್ದರೂ ಹೈಕಮಾಂಡ್ ಅವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.

ಯಡಿಯೂರಪ್ಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಕೇವಲ ನೆಪ ಮಾತ್ರಕ್ಕೆ ಯತ್ನಾಳ್ ಗೆ ಎಚ್ಚರಿಕೆ ನೀಡಿದ್ದರು. ಪಕ್ಷ ಯತ್ನಾಳ್ ವಿರುದ್ಧ ನೋಟಿಸ್ ಜಾರಿ ಮಾಡಿದ ಮರುದಿನವೇ ಯತ್ನಾಳ್ ಯಡಿಯೂರಪ್ಪ ವಿರುದ್ಧ ಮತ್ತೆ ಮತ್ತೆ ಹೇಳಿಕೆ ನೀಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಹೈಕಮಾಂಡ್ ಮುಂದಾಗಿಲ್ಲ.

ಯಡಿಯೂರಪ್ಪ ಅವರು ನೇಮಿಸಿದ ಪಕ್ಷದ ಮೂರು ಮಾಜಿ ಸಚಿವರ ಮೇಲೆ ಗಂಭೀರವಾದ ಆರೋಪಗಳು ಬಂದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ನ್ಯಾಯಾಲಯದಿಂದಲೂ ಹಲವು ಪ್ರಕರಣಗಳ ಕುರಿತು ಸಿಎಂ ವಿರುದ್ಧ ತನಿಖೆಗೆ ಆದೇಶ ಬಂದಿದೆ. ಯಡಿಯೂರಪ್ಪ ಬೆನ್ನ ಹಿಂದೆ ಈಗ ಸಂಘಪರಿವಾರ ಮೂಲದ ಶಾಸಕರು, ಸಚಿವರು ಹಾಗೂ ಹೈಮಾಂಡ್ ಗಳು ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಸಿಎಂ ಯಡಿಯೂರಪ್ಪ ವಿರುದ್ಧವೇ ಈಶ್ವರಪ್ಪ ಗಂಭೀರ ಆರೋಪ | ಸರ್ಕಾರ ಗಡಗಡ

ಇತ್ತೀಚಿನ ಸುದ್ದಿ