ಉನ್ನಾವೋ: ಬಾಲಕಿಯರಿಗೆ ವಿಷ ಕುಡಿಸಿ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು
ಉನ್ನಾವೋ: ಬಾಲಕಿಯರಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿನಯ್ ಕುಮಾರ್ ಅಲಿಯಾಸ್ ಲಂಬು ಹಾಗೂ ಇನ್ನೋರ್ವ ಅಪ್ರಾಪ್ತ ವಯಸ್ಕನನ್ನು ಬಂಧಿಸಲಾಗಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಹೊಸ ತಿರುವು ಕಂಡಿದೆ.
ಉನ್ನಾವೋ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಪ್ರಮುಖ ಆರೋಪಿ ವಿನಯ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಈತನ ಜೊತೆಗೆ ಇನ್ನೋರ್ವನನ್ನು ಬಂಧಿಸಲಾಗಿತ್ತು. ಈತ ಅಪ್ರಾಪ್ತ ವಯಸ್ಕ ಎಂದು ಹೇಳಲಾಗಿತ್ತು. ಆದರೆ ಈತನ ದಾಖಲೆಗಳನ್ನು ಪರಿಶೀಲಿಸಿದಾಗ ಈತನೂ ವಯಸ್ಕ ಎಂದು ತಿಳಿದು ಬಂದಿದೆ.
ಆರೋಪಿಯ ಆಧಾರ್ ಕಾರ್ಡ್ ನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಆರೋಪಿಯು ವಯಸ್ಕ ಎಂದು ತಿಳಿದು ಬಂದಿದೆ. ಇನ್ನೂ ವಿಷ ಸೇವಿಸಿದ ಪರಿಣಾಮ ಇಬ್ಬರು ಬಾಲಕಿಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೋರ್ವಳು ಗಂಭೀರ ಸ್ಥಿತಿಯಲ್ಲಿ ಇನ್ನೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಈ ಪ್ರಕರಣದ ಪ್ರಾಥಮಿಕ ವರದಿಯ ಪ್ರಕಾರ ಈ ಹತ್ಯೆಗೆ “ವನ್ ಸೈಡ್ ಲವ್”ಕಾರಣ ಎಂದು ಹೇಳಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಾಲಕಿಯನ್ನು ಪ್ರಮುಖ ಆರೋಪಿ ವಿನಯ್ ಕುಮಾರ್ ಪ್ರೀತಿಸುತ್ತಿದ್ದ. ಆಕೆ ಪ್ರೀತಿಗೆ ನಿರಾಕರಿಸಿದಾಗ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ.