ನೇಪಾಳದಲ್ಲಿ ಭೀಕರ ದಿಢೀರ್ ಪ್ರವಾಹ: 160ಕ್ಕೂ ಹೆಚ್ಚು ಸಾವು, 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ
ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ (Flash floods) ಕನಿಷ್ಠ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತದಲ್ಲಿ ಸಾವಿರಾರು ಜನರು ನಾಪತ್ತೆಯಾಗಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಭಾರತೀಯರೂ ಸೇರಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸ್ಪಷ್ಟಪಡಿಸಿದ್ದಾರೆ.
ಭೋಟೆ ಕೋಶಿ ನದಿ ಪಾತ್ರ ಮತ್ತು ರಸುವಾ (Rasuwa) ಪ್ರದೇಶದಲ್ಲಿ ಪ್ರವಾಹದ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ‘ಮಾನಸಸರೋವರ ಯಾತ್ರೆ’ಗೆ ತೆರಳಿದ್ದ ಭಾರತೀಯ ಯಾತ್ರಾರ್ಥಿಗಳು ಎಂದು ವರದಿಯಾಗಿದೆ. ಭಾರತೀಯರಲ್ಲದೆ ಆಸ್ಟ್ರೇಲಿಯಾ, ಬ್ರಿಟನ್, ಮಲೇಷ್ಯಾ ಮುಂತಾದ ದೇಶಗಳ ಪ್ರವಾಸಿಗರೂ ನಾಪತ್ತೆಯಾಗಿದ್ದಾರೆ.
ಆರಂಭದಲ್ಲಿ ಭೂಕಂಪದಿಂದ ಹಿಮಪಾತವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಹಿಮನದಿ ಕುಸಿತ (Glacial collapse) ಉಂಟಾಗಿ ಈ ಮಹಾ ಪ್ರವಾಹ ಸೃಷ್ಟಿಯಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಖಚಿತಪಡಿಸಿದೆ.
ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರ ಪ್ರಕಾರ, ಕೇವಲ ಕೆಲವೇ ಗಂಟೆಗಳಲ್ಲಿ ಪ್ರವಾಹವು ಹಲವು ಪಟ್ಟಣಗಳನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಬಹುಮಹಡಿ ಕಟ್ಟಡಗಳ ಕೆಳ ಅಂತಸ್ತುಗಳು ಕೆಸರು ಮತ್ತು ಮಣ್ಣಿನಿಂದ ಆವೃತವಾಗಿದ್ದು, ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ.
ಸಹಾಯವಾಣಿ (Helpline): ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯವಾಣಿಗಳನ್ನು ಬಿಡುಗಡೆ ಮಾಡಿದೆ. ವಾಟ್ಸಪ್ ಮೂಲಕವೂ ಸಂಪರ್ಕಿಸಬಹುದಾದ ಸಂಖ್ಯೆಗಳು: +977 9851316807, +977 9709107500, +977 9810326117.
ಕರ್ನಾಟಕ ಸರ್ಕಾರದ ನೆರವು: ಕನ್ನಡಿಗರ ರಕ್ಷಣೆ ಮತ್ತು ಮಾಹಿತಿಗಾಗಿ ಕರ್ನಾಟಕ ಸರ್ಕಾರವು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು (SEOC) ಸಕ್ರಿಯಗೊಳಿಸಿದ್ದು, 1070 ಮತ್ತು 080–22253707 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಸದ್ಯ ನಾಪತ್ತೆಯಾದವರ ಶೋಧಕ್ಕಾಗಿ ನೇಪಾಳದ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಭಾರತ ಸರ್ಕಾರವು ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























