ಸೌಜನ್ಯ ಪ್ರಕರಣ ಮರುತನಿಖೆ: 'ಮೆಟೀರಿಯಲ್ ಆಬ್ಜೆಕ್ಟ್ ನಂ. 15' ಚೂಡಿದಾರ್ ಟಾಪ್ ಮತ್ತು DNA ಸಾಕ್ಷ್ಯಕ್ಕೆ ಸಿಕ್ಕಿತು ಸುಪ್ರೀಂ ಕೋರ್ಟ್ ಮಹತ್ವ - Mahanayaka

ಸೌಜನ್ಯ ಪ್ರಕರಣ ಮರುತನಿಖೆ: ‘ಮೆಟೀರಿಯಲ್ ಆಬ್ಜೆಕ್ಟ್ ನಂ. 15’ ಚೂಡಿದಾರ್ ಟಾಪ್ ಮತ್ತು DNA ಸಾಕ್ಷ್ಯಕ್ಕೆ ಸಿಕ್ಕಿತು ಸುಪ್ರೀಂ ಕೋರ್ಟ್ ಮಹತ್ವ

soujanya case
22/09/2026

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ‘ಚೂಡಿದಾರ್ ಟಾಪ್’ (ಮೆಟೀರಿಯಲ್ ಆಬ್ಜೆಕ್ಟ್ ನಂ. 15) ಮಹತ್ವದ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ. ಈ ಸಾಕ್ಷ್ಯಕ್ಕೆ ಇಂದಿಗೂ ಸಾಕ್ಷ್ಯ ಮೌಲ್ಯ (Evidentiary Value) ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಅದರಲ್ಲಿ ದೊರೆತಿರುವ ಡಿಎನ್ ಎ (DNA) ಮಾದರಿಯನ್ನು ಹೊಸದಾಗಿ ಪತ್ತೆಯಾಗುವ ಶಂಕಿತರ ಡಿಎನ್ಎ ಜೊತೆ ಹೋಲಿಕೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಮೆಟೀರಿಯಲ್ ಆಬ್ಜೆಕ್ಟ್ ನಂ. 15 ರಲ್ಲಿ ಸಿಕ್ಕಿರುವ ಡಿಎನ್ ಎ ಮಾದರಿಯು ಮರುತನಿಖೆಯಲ್ಲಿ ನಿರ್ಣಾಯಕವಾಗಲಿದೆ.  ಚೂಡಿದಾರ್ ಟಾಪ್ ನಲ್ಲಿ ಸಂತೋಷ್ ರಾವ್ ಹೊರತುಪಡಿಸಿ ಇತರ ವ್ಯಕ್ತಿಗಳ ಕೂದಲು ಪತ್ತೆಯಾಗಿದ್ದವು. 8 ಸಂಭಾವ್ಯ ಸಾಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ರಕ್ಷಣೆ ಒದಗಿಸಲಾಗಿದೆ.

ಈಗಾಗಲೇ ಖುಲಾಸೆಯಾಗಿರುವುದರಿಂದ ಸಂತೋಷ್ ರಾವ್ ಅವರನ್ನು ಮತ್ತೆ ತನಿಖೆಗೆ ಒಳಪಡಿಸುವಂತಿಲ್ಲ. ಇತರ ಶಂಕಿತರಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಹಾಗೂ ಉದಯ್ ಜೈನ್ ಅವರ ಪಾತ್ರಗಳ ಬಗ್ಗೆ ಎಸ್ ಐಟಿ (SIT) ಸ್ವತಂತ್ರ ತನಿಖೆ ನಡೆಸಲು ಅವಕಾಶ ಇದೆ ಎಂದು ವರದಿ ತಿಳಿಸಿದೆ.

ಸೆಷನ್ಸ್ ನ್ಯಾಯಾಲಯದ ತೀರ್ಪಿನಲ್ಲಿನ ಹಲವು ಅಂಶಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಬೆಂಗಳೂರು ಟಾಕ್ಸಿಕಾಲಜಿ ವಿಭಾಗದ ಸಹಾಯಕ ನಿರ್ದೇಶಕ ವಿನೋದ್ ಜೆ. ಲಕ್ಕಪ್ಪನ್ ಅವರು ಈ ಹಿಂದೆ ನೀಡಿದ್ದ ಸಾಕ್ಷ್ಯದ ಪ್ರಕಾರ, ಮೆಟೀರಿಯಲ್ ಆಬ್ಜೆಕ್ಟ್ ನಂ. 15 ರಲ್ಲಿ ಪ್ರಕರಣದ ಮೂಲ ಆರೋಪಿ ಎಂದು ಹೇಳಲಾಗಿದ್ದ ಸಂತೋಷ್ ರಾವ್ ಹೊರತುಪಡಿಸಿ ಇತರ ವ್ಯಕ್ತಿಗಳ ಕೂದಲುಗಳು ಕಂಡುಬಂದಿದ್ದವು.

ಪ್ರಕರಣದಲ್ಲಿ ಹೊಸ ಶಂಕಿತರು ಪತ್ತೆಯಾದರೆ, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಈ ಚೂಡಿದಾರ್ ಟಾಪ್ನಲ್ಲಿ ದೊರೆತಿರುವ ಡಿಎನ್ಎ ಮಾದರಿಯೊಂದಿಗೆ ಹೋಲಿಕೆ ಮಾಡಲು ತಾಂತ್ರಿಕವಾಗಿ ಸಾಧ್ಯವಿದೆ. ಇದೇ ಕಾರಣಕ್ಕೆ ಈ ಸಾಕ್ಷ್ಯವು ಮರುತನಿಖೆಗೆ ಅತ್ಯಂತ ಪ್ರಮುಖ ತಾಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ.

ಪ್ರಕರಣದ ಮರುತನಿಖೆಯಲ್ಲಿ ಎಂಟು ಸಂಭಾವ್ಯ ಸಾಕ್ಷಿಗಳು ಮತ್ತೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವೇ ವಾರಗಳಲ್ಲಿ ಅವರನ್ನು ಪತ್ತೆಹಚ್ಚಿ ರಕ್ಷಣೆ ಒದಗಿಸಿದೆ.

ಆದರೆ, ಇಷ್ಟು ಕನಿಷ್ಠ ಅವಧಿಯಲ್ಲಿ ಪತ್ತೆಯಾಗಬಹುದಾಗಿದ್ದ ಈ ಸಾಕ್ಷಿಗಳನ್ನು ಹಿಂದಿನ ಮೂರು ತನಿಖಾ ಸಂಸ್ಥೆಗಳು ಸರಿಯಾದ ಸಮಯಕ್ಕೆ ಏಕೆ ಪತ್ತೆಹಚ್ಚಿ ವಿಚಾರಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್ ಸಾಕ್ಷ್ಯಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಮರುತನಿಖೆಯ ಅರ್ಜಿಯನ್ನು ತಿರಸ್ಕರಿಸಿತ್ತು, ಆದರೆ ಸುಪ್ರೀಂ ಕೋರ್ಟ್ ಹೈಕೋರ್ಟ್ ನ ಆ ನಿಲುವನ್ನು ತಳ್ಳಿಹಾಕಿದೆ.

ಹೊಸದಾಗಿ ರಚನೆಯಾಗುವ ವಿಶೇಷ ತನಿಖಾ ತಂಡ (SIT) ನಡೆಸುವ ತನಿಖೆಯಿಂದ ಸಂತೋಷ್ ರಾವ್ ಅವರನ್ನು ಸುಪ್ರೀಂ ಕೋರ್ಟ್ ಹೊರಗಿಟ್ಟಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಈಗಾಗಲೇ ಖುಲಾಸೆಯಾಗಿರುವುದರಿಂದ, ಭಾರತೀಯ ಸಂವಿಧಾನದ ವಿಧಿ 20(2) ಹಾಗೂ CrPC ಸೆಕ್ಷನ್ 300ರ ಅಡಿಯಲ್ಲಿ ಅವರಿಗೆ ರಕ್ಷಣೆ ದೊರೆಯಲಿದೆ. ಹೀಗಾಗಿ ಅವರ ವಿರುದ್ಧ ಮತ್ತೆ ಅಭಿಯೋಜನೆ ಅಥವಾ ತನಿಖೆ ನಡೆಸಲು ಅವಕಾಶವಿಲ್ಲ.

ಅದೇ ರೀತಿ, ಅರ್ಜಿದಾರರು ಉಲ್ಲೇಖಿಸಿರುವ ಮಲ್ಲಿಕ್ ಜೈನ್, ಧೀರಜ್ ಜೈನ್ ಹಾಗೂ ಉದಯ್ ಜೈನ್ ಅವರ ಪಾತ್ರಗಳ ಕುರಿತು ಎಸ್ ಐಟಿ ಸ್ವತಂತ್ರವಾಗಿ ತನಿಖೆ ನಡೆಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler