ತರಗತಿಯಲ್ಲಿ ಮಲಗಿದ್ದ ವಿದ್ಯಾರ್ಥಿಯನ್ನು ಕೂಡಿ ಹಾಕಿ ಹೋದ ಸಿಬ್ಬಂದಿ: ಶಾಲೆಯ ಎಲ್ಲಾ ನೌಕರರು ಸಸ್ಪೆಂಡ್! - Mahanayaka

ತರಗತಿಯಲ್ಲಿ ಮಲಗಿದ್ದ ವಿದ್ಯಾರ್ಥಿಯನ್ನು ಕೂಡಿ ಹಾಕಿ ಹೋದ ಸಿಬ್ಬಂದಿ: ಶಾಲೆಯ ಎಲ್ಲಾ ನೌಕರರು ಸಸ್ಪೆಂಡ್!

school
08/07/2026

ಬನಿಹಾಲ್ (ಜಮ್ಮು ಮತ್ತು ಕಾಶ್ಮೀರ): ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿಯೊಬ್ಬ ಮಲಗಿರುವುದನ್ನು ಗಮನಿಸದೇ ಶಾಲೆಯ ಸಿಬ್ಬಂದಿ ತರಗತಿಯನ್ನು ಹೊರಗಿನಿಂದ ಲಾಕ್ ಮಾಡಿ ತೆರಳಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್‌ ನಲ್ಲಿ ನಡೆದಿದೆ. ಶಾಲೆಯ ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಇಡೀ ಶಾಲಾ ಸಿಬ್ಬಂದಿಯನ್ನು ಅಮಾನತು (ಸಸ್ಪೆಂಡ್) ಮಾಡಿದೆ.

ನಡೆದಿದ್ದೇನು?

ಶಾಲೆಯಲ್ಲಿ 15 ದಿನಗಳ ಕಾಲ ಬೇಸಿಗೆ ರಜೆ ಘೋಷಿಸಲಾಗಿತ್ತು. ರಜೆಯ ಹಿನ್ನೆಲೆಯಲ್ಲಿ ಶಾಲೆಯನ್ನು ಸಂಪೂರ್ಣವಾಗಿ ಲಾಕ್ ಮಾಡಿ ಹೋಗುವ ಗಡಿಬಿಡಿಯಲ್ಲಿ ಸಿಬ್ಬಂದಿ ತರಗತಿಯೊಳಗೆ ಮಲಗಿದ್ದ ವಿದ್ಯಾರ್ಥಿಯನ್ನು ಗಮನಿಸಿಲ್ಲ. ರೂಂಗೆ ಬೀಗ ಹಾಕಿ ಎಲ್ಲರೂ ಹೊರಟು ಹೋಗಿದ್ದಾರೆ.

ಬಳಿಕ ವಿದ್ಯಾರ್ಥಿ ಎಚ್ಚರಗೊಂಡು ನೋಡಿದಾಗ ತರಗತಿಯೊಳಗೆ ಲಾಕ್ ಆಗಿರುವುದು ಬೆಳಕಿಗೆ ಬಂದಿದೆ. ಗಾಬರಿಗೊಂಡ ವಿದ್ಯಾರ್ಥಿ ಜೋರಾಗಿ ಕಿರುಚಾಡಿದ್ದರೂ ಶಾಲೆಯಲ್ಲಿ ಯಾರೂ ಇಲ್ಲದ ಕಾರಣ ಸಹಾಯ ಸಿಕ್ಕಿರಲಿಲ್ಲ. ರಾತ್ರಿ ವೇಳೆ ಶಾಲೆಯ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಮಗುವಿನ ಅಳು ಹಾಗೂ ಕೂಗಾಟದ ಧ್ವನಿ ಕೇಳಿಸಿದೆ. ತಕ್ಷಣ ಅವರು ಶಾಲೆಗೆ ಬಂದು ಪರಿಶೀಲಿಸಿದಾಗ ವಿದ್ಯಾರ್ಥಿ ಒಳಗಿರುವುದು ಪತ್ತೆಯಾಗಿದೆ.

ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆಯು ಶಾಲೆಯ ಇಡೀ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಗಂಭೀರ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸುವಂತೆ ಮುಖ್ಯ ಶಿಕ್ಷಣ ಅಧಿಕಾರಿ (CEO) ಆದೇಶಿಸಿದ್ದಾರೆ. ಸದ್ಯ ವಿದ್ಯಾರ್ಥಿ ತರಗತಿಯೊಳಗೆ ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ