ಸುರತ್ಕಲ್ ಟೋಲ್ ತಕ್ಷಣ ತೆರವಿಗೆ ಆಗ್ರಹಿಸಿ ಅ. 28ರಿಂದ ಅನಿರ್ಧಿಷ್ಟಕಾಲ ಧರಣಿ
ಸುರತ್ಕಲ್: ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ 28 ರಿಂದ ಸುರತ್ಕಲ್ ಟೋಲ್ ಗೇಟ್ ಸಮೀಪ ಬೇಡಿಕೆ ಈಡೇರುವವರಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ಚದಲ್ಲಿ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಂಗಳೂರಲ್ಲಿ ಇಂದು ಸಂಜೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಕ್ರಮ ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಸರಕಾರ ಪದೇ ಪದೇ ಮಾತು ತಪ್ಪುತ್ತಿದೆ. ತೆರವಿನ ತೀರ್ಮಾನ ಆಗಿದೆ ಎಂದು ಅಧಿಕೃತವಾಗಿ ಪ್ರಕಟಿಸುವ ಸರಕಾರ ಹಾಗೂ ಅಧೀನ ಅಧಿಕಾರಿಗಳು ಟೋಲ್ ತೆರವಿಗೆ ಸಂಬಂಧಿಸಿ ವಾರ, ತಿಂಗಳು ಎಂದು ವರ್ಷದಿಂದ ಕಾಲಹರಣ ಮಾಡುತ್ತಿರುವುದು ಜನರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಜುಲೈ ತಿಂಗಳ ಆರಂಭದಿಂದ ಇಂದು, ನಾಳೆ ಎಂದು ಜನರನ್ನು ವಂಚಿಸುತ್ತಿರುವುದು ಖಂಡನೀಯ ಎಂದರು.
ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಸಂದರ್ಭ ಜನಾಕ್ರೋಶ ಮುಗಿಲು ಮುಟ್ಟಿದಾಗ ಸ್ವತಹ ಸಂಸದರೇ 20 ದಿನಗಳ ಕಾಲಾವಧಿ ನೀಡುವಂತೆ ಕೋರಿದ್ದಾರೆ. ಆ ಅವಧಿ ನವೆಂಬರ್ 07 ಕ್ಕೆ ಕೊನೆಗೊಳ್ಳುತ್ತದೆ. ಟೋಲ್ ಮುಚ್ಚುವ ತೀರ್ಮಾನ ಜಾರಿಗೊಳಿಸುವುದು, ನೀಡಿದ ಭರವಸೆಯಂತೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಈಗ ಹೋರಾಟ ಸಮಿತಿಯ ಹಾಗೂ ಜೊತೆಗಿರುವ ಸಮಾನ ಮನಸ್ಕ ಸಂಘಟನೆಯ ಹೋರಾಟವಾಗಿ ಮಾತ್ರ ಉಳಿದಿಲ್ಲ. ಅಕ್ಟೋಬರ್ 18 ರಂದು ಎಲ್ಲಾ ರೀತಿಯ ದಮನಗಳ ನಡುವೆಯೂ ಟೋಲ್ ಗೇಟ್ ಮುತ್ತಿಗೆಗೆ ಅಪಾರ ಜನ ಬೆಂಬಲ ದೊರಕಿರುವುದು ಟೋಲ್ ವಿರೋಧಿ ಹೋರಾಟ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಸ್ತ ಜನತೆಯ ಹೋರಾಟವಾಗಿ ಪರಿವರ್ತನೆಗೊಂಡಿರುವುದನ್ನು ಎತ್ತಿತೋರಿಸುತ್ತದೆ ಎಂದರು.
ಇಷ್ಟು ದೊಡ್ಡ ಪ್ರಮಾಣದ ಜನಾಗ್ರಹದ ಹೊರತಾಗಿಯೂ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಬಿಜೆಪಿ ಸರಕಾರ ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಸಂಸದ, ಶಾಸಕರುಗಳು ಮುಂದಾಗದಿರುವುದು ಜನಸಾಮಾನ್ಯರ ಬೇಡಿಕೆಗಳ ಕುರಿತು ಅವರಿಗಿರುವ ಅನಾದಾರ, ಅಸಹನೆಯನ್ನು ಎತ್ತಿತೋರಿಸುತ್ತದೆ. ಹಾಗೂ ನವಯುಗ್ ನಂತಹ ದೈತ್ಯ ಕಂಪೆನಿಗಳ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದನ್ನು ಜಾಹೀರು ಪಡಿಸಿದೆ. ಇದು ಖಂಡನೀಯ. ಸಂಸದ ನಳಿನ್ ಕುಮಾರ್ ಕಟೀಲ್ 20 ದಿನಗಳ ಕಾಲಾವಧಿ ಕೋರಿರುವುದು, ಉಳಿದ ಶಾಸಕರುಗಳು ಕನಿಷ್ಟ ಪ್ರತಿಕ್ರಿಯೆಯನ್ನೂ ನೀಡದಿರುವುದು ಟೋಲ್ ಗೇಟ್ ಮುಚ್ಚುವ ತೀರ್ಮಾನ ಜಾರಿಯಾಗುವ ಕುರಿತು ನಮಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಮುತ್ತಿಗೆ ಸಂದರ್ಭದ ಬೆಳವಣಿಗೆಗಳು ದೊಡ್ಡ ವಿವಾದವಾಗಿ ಪರಿವರ್ತನೆಗೊಂಡಾಗಲು ಬಾಯಿ ಬಿಚ್ಚದ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಈಗ ದಿಢೀರ್ ಆಗಿ ಟೋಲ್ ಗೇಟ್ ಮುಚ್ಚುವ ಅವಧಿಯನ್ನು ನವಂಬರ್ ತಿಂಗಳ ಕೊನೆಯವರಗೆ ಮುಂದೂಡಿರುವುದು, ಸಂಸದ ನಳಿನ್ ಕುಮಾರ್ ಕಟೀಲ್ ಈ ಕುರಿತು ಪ್ರತಿಕ್ರಿಯಿಸದಿರುವುದು ಸರಕಾರ ಹಾಗೂ ಸಂಸದ, ಶಾಸಕರುಗಳ ಮೇಲಿನ ಭರವಸೆಯನ್ನು ಪೂರ್ತಿ ಕಳಚಿ ಹಾಕಿದೆ. ಆದುದರಿಂದ ಸಂಸದ ನಳಿನ್ ಕೇಳಿದ ಕಾಲಾವಧಿಯಂತೆ ನವಂಬರ್ 07 ರ ಒಳಗಡೆ ಸುರತ್ಕಲ್ ಟೋಲ್ ಗೇಟ್ ಸುಲಿಗೆಗೆ ಅಂತ್ಯ ಹಾಡುವಂತೆ ಒತ್ತಾಯಿಸಿ ಹಗಲು ರಾತ್ರಿ ಧರಣಿ ಆರಂಭಿಸುತ್ತಿದ್ದೇವೆ ಎಂದರು.
ಅವಿಭಜಿತ ಜಿಲ್ಲೆಯ ಸಂಸದರು, ಶಾಸಕರುಗಳು ಮನಸ್ಸು ಮಾಡಿದರೆ ಸುರತ್ಕಲ್ ಟೋಲ್ ಗೇಟ್ ತೆರವು 24 ಗಂಟೆಯ ಅವಧಿಯಲ್ಲಿ ನಿಯಮಬದ್ದವಾಗಿಯೇ ಆಗಿಹೋಗುತ್ತದೆ. ಆದರೆ ವ್ಯಾಪಾರಿ ಹಿತಾಸಕ್ತಿಗಳ ಪರವಹಿಸಿ ಜನವಿರೋಧಿ ನಿಲುವುಗಳಿಗೇ ಅಂಟಿಕೊಂಡಿರುವ ಜನಪ್ರತಿನಿಧಿಗಳು ಜನಾಭಿಪ್ರಾಯವನ್ನು ತಿರಸ್ಕರಿಸುತ್ತಿದ್ದಾರೆ. ನವಯುಗ್ ಕಂಪೆನಿಯ ಬಾಹುಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಬಂಧಿಯಾಗಿದ್ದಾರೆ, ಜನತೆಗಿಂತ ಕಂಪೆನಿಗಳಿಗೆ ಪೂರ್ತಿನಿಷ್ಟರಾಗಿದ್ದಾರೆ ಎಂಬುದು ಇವರ ಈಗಿನ ನಡವಳಿಕೆಯಿಂದ ಹೆಚ್ಚು ಸ್ಪಷ್ಟವಾಗುತ್ತಿದೆ ಎಂದರು.
ಪೊಲೀಸ್ ಕೇಸು ವಾಪಸಾತಿಗೆ ಆಗ್ರಹ:
ಟೋಲ್ ಗೇಟ್ ಮುತ್ತಿಗೆ ಶಾಂತಿಯುತವಾಗಿ ನಡೆದಿದ್ದರೂ ಶಾಸಕ, ಸಂಸದರುಗಳ ಕುಮ್ಮಕ್ಕಿನಿಂದ ಟೋಲ್ ಗುತ್ತಿಗೆದಾರರ ಮೂಲಕ ಬಿಜೆಪಿ ಸಂಸದ, ಶಾಸಕರುಗಳು ಹೋರಾಟ ಸಮಿತಿಯ ಮೇಲೆ ಎರಡು ಮೊಕದ್ದಮೆಗಳನ್ನು ಹೂಡಿಸಿದ್ದಾರೆ. ಇಂತಹ ಮೊಕದ್ದಮೆ, ಪೊಲೀಸ್ ಬಲಪ್ರಯೋಗದಿಂದ ಹೋರಾಟವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಟೋಲ್ ಗೇಟ್ ಮುಚ್ಚುವುದು ಮಾತ್ರ ಹೋರಾಟ ಕೊನೆಗೊಳಿಸಲು ಇರುವ ದಾರಿ. ಆಧಾರರಹಿತ ಸುಳ್ಳು ಮೊಕದ್ದಮೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ನಾವು ಇದೇ ಸಂದರ್ಭ ಆಗ್ರಹಿಸುತ್ತಿದ್ದೇವೆ. ಬದಲಿಗೆ ಸುಳ್ಳು ಮೊಕದ್ದಮೆಯ ಆಧಾರದಲ್ಲಿ ಹೋರಾಟಗಾರರನ್ನು ಬಂಧಿಸಲು ಮುಂದಾದರೆ ನಾವು ಜೈಲು ಸೇರಲು ಸಿದ್ದರಾಗಿದ್ದೇವೆ. ಈ ಕುರಿತು ಕಾನೂನು ಹೋರಾಟಕ್ಕೆ ನಮ್ಮ ಜೊತೆಗಿರುವ ಜನಪರ ವಕೀಲರ ವೇದಿಕೆ ಸಿದ್ದತೆ ನಡೆಸುತ್ತಿದೆ ಎಂದರು.
ಜನತೆಯಲ್ಲಿ ಮನವಿ: ಟೋಲ್ ಗೇಟ್ ವಿರೋಧಿ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದೆ. ದ.ಕ. ಉಡುಪಿ ಜಿಲ್ಲೆಗಳ ಒಕ್ಕೊರಲ ಜನಾಭಿಪ್ರಾಯವನ್ನು ಈ ಹೋರಾಟದಲ್ಲಿ ಕ್ರೋಢೀಕರಿಸುವ ಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಟೋಲ್ ಗೇಟ್ ತೆರವುಗೊಳ್ಳದೆ ನಮ್ಮ ಹೋರಾಟ ನಿಲ್ಲದು. ಜನತೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದು. ಹಗಲು ರಾತ್ರಿ ಅನಿರ್ಧಿಷ್ಟಾವಧಿ ಧರಣಿಯನ್ನು ಯಶಸ್ಸುಗೊಳಿಸಲು ಜನತೆ ಒಗ್ಗಟ್ಟಿನ ಬೆಂಬಲ ನೀಡಬೇಕು ಎಂದು ವಿನೀತವಾಗಿ ಮನವಿ ಮಾಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ವಿವಿಧ ಸಂಘಟನೆಗಳ ದಿನೇಶ್ ಹೆಗ್ಡೆ ಉಳೆಪಾಡಿ, ಪುರುಷೋತ್ತಮ ಚಿತ್ರಾಪುರ, ರಘು ಎಕ್ಕಾರು, ಶೇಖರ ಹೆಜಮಾಡಿ, ಕಿಶನ್ ಹೆಗ್ಡೆ ಕೊಲ್ಕೆಬೈಲು, ದಿನೇಶ್ ಕುಂಪಲ, ಬಿ ಕೆ ಇಮ್ತಿಯಾಜ್, ಮುಹಮ್ಮದ್ ಕುಂಜತ್ತಬೈಲ್, ಪ್ರತಿಭಾ ಕುಳಾಯಿ, ದಯಾನಂದ ಶೆಟ್ಟಿ, ಶ್ರೀನಾಥ್ ಕುಲಾಲ್, ರಮೇಶ್ ಟಿ ಎನ್. ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka