“ಶಕ್ತಿಯೇ ಜೀವನ, ದುರ್ಬಲತೆಯೇ ಮರಣ” | ಯುವಜನತೆಗೆ ಸ್ವಾಮಿ ವಿವೇಕಾನಂದರ  ಸಂದೇಶ - Mahanayaka

“ಶಕ್ತಿಯೇ ಜೀವನ, ದುರ್ಬಲತೆಯೇ ಮರಣ” | ಯುವಜನತೆಗೆ ಸ್ವಾಮಿ ವಿವೇಕಾನಂದರ  ಸಂದೇಶ

12/01/2021

ಇಂದು ವಿಶ್ವ ಕಂಡ ಭಾರತದ ತತ್ವ ಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನ.  ಜನವರಿ 12, 1863ರಂದು ಜನಿಸಿದ ಸ್ವಾಮಿ ವಿವೇಕಾನಂದರು ತಮ್ಮ ತತ್ವಾದರ್ಶಗಳಿಂದ ಇಡೀ ವಿಶ್ವವನ್ನು ಸೆಳೆದವರು. ಮುಖ್ಯವಾಗಿ ದೇಶದ ಯುವಕರಿಗೆ, “ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ” ಎಂದು ಕರೆ ನೀಡಿದವರು.  ಪ್ರಸ್ತುತ ಸನ್ನಿವೇಶದಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳು ಯುವಕರಿಗೆ  ಪ್ರೇರಕವಾಗಬೇಕಿದೆ.

ದೇಶದ ಯುವ ಜನತೆ ಇಂದಿಗೂ ಉದ್ಯೋಗವಿಲ್ಲದೇ, ನರಳುತ್ತಿದ್ದಾರೆ. ಪ್ರಪಂಚ ಆಧುಕತೆಯ ಕಡೆಗೆ ಸಾಗುತ್ತಿದ್ದರೆ, ಭಾರತ ಕೂಡ ಆಧುನಿಕತೆಯ ಕಡೆಗೆ ಸಾಗುತ್ತಿದೆ. ಆದರೆ, ಭಾರತದ ಸಾಮಾಜಿಕ ವ್ಯವಸ್ಥೆ ಇಂದಿಗೂ ಸರಿಯಾಗದೇ ಹಾಗೆಯೇ ಉಳಿದು ಬಿಟ್ಟಿದೆ. ವಿವೇಕಾನಂದರು. ಈ ದೇಶದ ಯುವಜನತೆಯ ಮೇಲೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ ಯುವಜನತೆ ದೇಶದಲ್ಲಿ ಪ್ರತಿ ಹಂತದಲ್ಲಿಯೂ ಹಿನ್ನಡೆ ಅನುಭವಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ದೇಶವನ್ನು ಯಾವ ಸರ್ಕಾರ ಆಳ್ವಿಕೆ ಮಾಡಿದರೂ, ಬಡತನ ನಿವಾರಣೆ ಆಗಿಲ್ಲ. ಜನರು ಪ್ರಬುದ್ಧರಾಗಿಲ್ಲ, ಅಪರಾಧ ಕೃತ್ಯಗಳು ನಿಂತಿಲ್ಲ. ಜನರು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ.  ಈ ನಡುವೆ ಕೊವಿಡ್ 19 ಎನ್ನುವ ಚಿಕ್ಕ ಅಣು ಸೃಷ್ಟಿಸಿದ ಮಾರಣಹೋಮದಿಂದಾಗಿ ಇಡೀ ದೇಶವೇ ಜರ್ಜರಿತವಾಗಿದೆ. ತಿಂಗಳುಗಟ್ಟಲೆ ದೇಶ ಬಂದ್ ಆಗುವ ಮೂಲಕ ಇಡೀ ದೇಶವನ್ನೇ ಈ ವೈರಾಣು ಅಲುಗಾಡಿಸಿದೆ.

ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಎದುರಿಸ ಬೇಕಾದರೆ, ವಿವೇಕಾನಂದರು ಅವರು ಹೇಳಿರುವ ಈ ಮಾತನ್ನ ಯುವಜನತೆ ಪಾಲಿಸಬೇಕು. “ಶಕ್ತಿಯೇ ಜೀವನ, ದುರ್ಬಲತೆಯೇ ಮರಣ” ಎಂದು ವಿವೇಕಾನಂದರು ಹೇಳುತ್ತಾರೆ. ನಾವು ಸಮಸ್ಯೆಗಳ ಮುಂದೆ ಶಕ್ತಿಶಾಲಿಗಳಾಗಿ ನಿಲ್ಲಬೇಕೇ ಹೊರತು ಎಂದಿಗೂ ದುರ್ಬಲವಾಗಬಾರದು. ಸಮಸ್ಯೆ ಮೂಲವನ್ನು ಹುಡುಕಿ ಪರಿಹಾರವನ್ನುನಾವೇ ಕಂಡುಕೊಳ್ಳಲು ಮುಂದಾಗಬೇಕು. ಸ್ವಾಮಿ ವಿವೇಕಾನಂದರು, ಈ ದೇಶದ ಯುವಕರನ್ನು ಶಕ್ತಿ ಶಾಲಿಯಾಗಿ ನೋಡಲು ಬಯಸಿದ್ದರು. ಆದರೆ, ಇಂದು ದೇಶದ ಯುವಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹೊರಬರಲಾಗದೇ ಸಂಕಷ್ಟದಲ್ಲಿದ್ದಾರೆ. ನಮ್ಮ ಸಮಸ್ಯೆಗೆ ಕಾರಣ ಏನು ಎಂದು ಅನ್ವೇಷಿಸುವಷ್ಟೂ ಸಾಮರ್ಥ್ಯವಿಲ್ಲದ ಸ್ಥಿತಿಯಲ್ಲಿ ಯುವಕರಿದ್ದಾರೆ. ವಾಟ್ಸಾಪ್ ಯುನಿವರ್ಸಿಟಿಯೇ ಎಲ್ಲದಕ್ಕೂ ಉತ್ತರವಾಗುತ್ತಿದೆ.. ಹಾಗಾಗಿ ಯುವ ಜನತೆ ಕೂಡ ದುರ್ಬಲವಾಗುತ್ತಿದ್ದಾರೆ.  ಸುಳ್ಳನ್ನು ಸತ್ಯ ಎಂದು ತಿಳಿದುಕೊಳ್ಳುವ ಮಟ್ಟಕ್ಕೆ ಯುವಕರು ಮುಂದಾಗುತ್ತಾರೆ. ವಿವೇಕವನ್ನು ತ್ಯಜಿಸಿ ಅವಿವೇಕದ ಕಡೆಗೆ ಸಾಗುತ್ತಿದ್ದಾರೆ. ಹೀಗಾಗಿ ಯುವಕರು ದುರ್ಬಲರಾಗಬಾರದು. ಅವರು ಶಕ್ತಿ ಶಾಲಿಗಳಾಗಬೇಕು. ಯಾವುದೇ ರಾಜಕೀಯ ಪಕ್ಷಗಳ ಅಡಿಯಾಳಾಗಿಯೋ, ಯಾವುದೋ ಸಂಘಟನೆಗಳ ಸೊತ್ತಾಗಿಯೋ ಯುವಕರು ಬಳಕೆಯಾಗದೇ, ತಮ್ಮ ಸ್ವಂತಿಕೆಯ ಮೂಲಕ ಈ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ಹೊಸ ರಾಜಕೀಯ ಶಕ್ತಿಯಾಗಬೇಕು.


Provided by

“ನೀವು ಯಾವುದೇ ಕೆಲಸವನ್ನು ಮಾಡಿದರೂ ನಿಮ್ಮ ಮನಸ್ಸು ಹಾಗೂ ಹೃದಯವನ್ನು ಆ ಕೆಲಸದ ಕಡೆಗೆ ನೀಡಿ” ಎಂದು ವಿವೇಕಾನಂದರು ಹೇಳುತ್ತಾರೆ. ಈ ಮಾತು ಯುವಕರಿಗೆ ಸ್ಪೂರ್ತಿದಾಯಕವಾಗಿದೆ.  ಜೊತೆಗೆ ಶಿಕ್ಷಣದ ಮಹತ್ವವನ್ನು ಅವರು ವಿವರಿಸುತ್ತಾ,  ಶಿಕ್ಷಣವೆಂದರೆ, ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಜ್ವಲಿಸುವುದು  ಅಥವಾ ಪ್ರಕಾಶಿಸುವುದು ಎಂದು ವಿವೇಕಾನಂದರು ಹೇಳುತ್ತಾರೆ.  ಆದರೆ ಇಂದು ಶಿಕ್ಷಣವೆಂದರೆ, ಕೇವಲ ರಾಂಕ್ ಪಡೆಯುವ, ಬಾಯಿಪಾಠ ಮಾಡಿ ಪರೀಕ್ಷೆ ಬರೆಯುವ ಒಂದು ಪ್ರಕ್ರಿಯೆಯಾಗಿ ಉಳಿದಿದೆ.

ಇತ್ತೀಚಿನ ಸುದ್ದಿ