ಪಶ್ಚಿಮ ಬಂಗಾಳ ಚುನಾವಣೆ:  ಎಐಐಎಂಐಎಂ ಸ್ಪರ್ಧೆಯಿಂದ ತಲೆಕೆಳಗಾಯ್ತೇ ರಾಜಕೀಯ ಲೆಕ್ಕಾಚಾರ | ಕೇಂದ್ರ ಬಿಂದುವಾದ ಒವೈಸಿ - Mahanayaka

ಪಶ್ಚಿಮ ಬಂಗಾಳ ಚುನಾವಣೆ:  ಎಐಐಎಂಐಎಂ ಸ್ಪರ್ಧೆಯಿಂದ ತಲೆಕೆಳಗಾಯ್ತೇ ರಾಜಕೀಯ ಲೆಕ್ಕಾಚಾರ | ಕೇಂದ್ರ ಬಿಂದುವಾದ ಒವೈಸಿ

13/11/2020

ಮಹಾನಾಯಕ ವಿಶೇಷ ವರದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೇವಲ ಬಿಜೆಪಿ-ಟಿಎಂಸಿ ಎರಡು ಪಕ್ಷಗಳ ಹೆಸರು ಮಾತ್ರವೇ ಕೇಳಿ ಬಂದಿತ್ತು. ಆದರೆ, ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ಅವರ ಎಐಐಎಂಐಎಂ ಪಕ್ಷ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ, ಇದರ ಪರಿಣಾಮ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೇಲೂ ಬಿದ್ದಿದ್ದು, ಈವರೆಗೆ ಮುಸ್ಲಿಮ್ ಮತಗಳ ಫಲಾನುಭವಿಯಾಗಿದ್ದ ಟಿಎಂಸಿಗೆ ಎಐಐಎಂಐಎಂ ಸೆಡ್ಡು ಹೊಡೆಯಲು ಸಿದ್ಧವಾಗಿದೆ.


Provided by

2011ರಲ್ಲಿ ಎಡರಂಗಗಳ ಸೋಲಿನ ನಂತರ, ಮಮತಾ ಬ್ಯಾನರ್ಜಿ ಅವರೊಬ್ಬರೇ ಅಲ್ಪಸಂಖ್ಯಾತ ಮತಗಳ ಫಲಾನುಭವಿಯಾಗಿದ್ದರು. ಅಲ್ಪಸಂಖ್ಯಾತರ ಮತಗಳ ಮೇಲೆ ಮಮತಾ ಬ್ಯಾನರ್ಜಿ ಭದ್ರವಾದ ಹಿಡಿತ ಸಾಧಿಸಿದ್ದರು. ಆದರೆ, ಎಐಐಎಂಐಎಂ ಸ್ಪರ್ಧೆಯಿಂದ ಮಮತಾ ಬ್ಯಾನರ್ಜಿಯ ಲೆಕ್ಕಚಾರಗಳು ತಲೆಕೆಳಗಾಗುವ ಸಾಧ್ಯತೆಗಳು ಕಂಡು ಬಂದಿದೆ.

ವಶ್ಚಿಮ ಬಂಗಾಳದಲ್ಲಿ ಶೇ.30ರಷ್ಟು ಮುಸ್ಲಿಮ್ ಮತಗಳಿವೆ. ಯಾವುದೇ ಸರ್ಕಾರ ರಚನೆಯಾಗಬೇಕಿದ್ದರೂ, ಈ ಮತಗಳು ಬಹಳ ಪ್ರಾಮುಖ್ಯತೆ ಹೊಂದಿದೆ. ಈ ಕಾರಣದಿಂದಲೇ ಮಮತಾ ಬ್ಯಾನರ್ಜಿ ಪ್ರತಿ ಚುನಾವಣೆಯಲ್ಲೂ ಗೆಲುವಿನ ನಗೆ ಬೀರಿದ್ದರು. ಆದರೆ, ಈ ಬಾರಿ ಟಿಎಂಸಿ ಪಕ್ಷಕ್ಕೆ ಎಐಐಎಂಐಎಂ ಹಾಗೂ ಅಸಾದುದ್ದೀನ್ ಒವೈಸಿ ಅನಿರೀಕ್ಷಿತ ಎದುರಾಳಿಯಾಗಿದ್ದಾರೆ.

ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶವನ್ನು ನಾವು ನಿರ್ದಿಷ್ಟವಾಗಿ ಹೀಗೆಯೇ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈವರೆಗೆ ಮುಸ್ಲಿಮ್ ಮತಗಳು ಕೇವಲ ಟಿಎಂಸಿ ಪಾಲಾಗಿತ್ತು. ಹೀಗಾಗಿಯೇ ಟಿಎಂಸಿಗೆ ಮುಸ್ಲಿಮ್ ಮತಗಳು ಈವರೆಗೆ ಭದ್ರತೆ ನೀಡಿದೆ. ಆದರೆ ಇನ್ನು ಮುಂದೆ ಏನನ್ನೂ ಹೇಳಲು ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿಗಿಂತಲೂ ಹೆಚ್ಚು ಕೇಸರಿ ಪಡೆಗಳ ವಿರುದ್ಧ ಘರ್ಜಿಸುವ ಒವೈಸಿ ಮತದಾರರಿಗೆ ಯಾಕೆ ಇಷ್ಟವಾಗಬಾರದು? ಎನ್ನುವ ಪ್ರಶ್ನೆಗಳು ಸದ್ಯ ಮೂಡಿವೆ.

ಬಿಹಾರದಲ್ಲಿ 5 ಸ್ಥಾನಗಳಲ್ಲಿ  ಎಐಐಎಂಐಎಂ ಗೆದ್ದ ಉತ್ಸಾಹದಲ್ಲಿರುವ ಅಸಾದುದ್ದೀನ್ ಒವೈಸಿ ಅವರು, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶದಲ್ಲಿಯೂ ಸ್ಪರ್ಧಿಸಲು ನಿರ್ಧಾರ ಕೈಗೊಂಡಿದ್ದಾರೆ. 294 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಮುಸ್ಲಿಮ್ ಮತಗಳನ್ನು ಎಐಐಎಂಐಎಂ ಪಡೆದರೆ, ಕಿಂಗ್ ಮೇಕರ್ ಸ್ಥಾನದಲ್ಲಿ ಓವೈಸಿ ಬಂದು ನಿಲ್ಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದ ಚುನಾವಣಾ ಕಣವು ಸದ್ಯ ಬೇರೆಯದ್ದೇ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮೂಕ ಪ್ರೇಕ್ಷಕರಾಗುವ ಸಾಧ್ಯತೆಯೇ ಹೆಚ್ಚು ಕಂಡು ಬರುತ್ತಿದೆ. ಮುಸ್ಲಿಮರು ಪರ್ಯಾಯ ಪಕ್ಷವೊಂದನ್ನು ಹುಡುಕುತ್ತಿರುವ ಸಂದರ್ಭದಲ್ಲಿಯೇ ಒವೈಸಿ ಅವರ ಎಐಐಎಂಐಎಂ ಪಕ್ಷ ಬಿಹಾರದಲ್ಲಿ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿರುಗಾಳಿಯನ್ನೇ ಎಬ್ಬಿಸಿದೆ. ಹೀಗಾಗಿ ಮುಸ್ಲಿಮರಿಗೆ ಎಐಐಎಂಐಎಂ ಮೇಲೆ ಯಾವುದೋ ಭರವಸೆ ಮೂಡಿದಂತಾಗಿದೆ. ಪಶ್ಚಿಮ ಬಂಗಾಳದ ಮತದಾರರ ಎದೆಯಲ್ಲಿ ಸಿಎಎ, ಎನ್ ಆರ್ ಸಿಯ ಹಿಂಸೆಯ ಉರಿ ಇನ್ನೂ ತಗ್ಗಿಲ್ಲ, ಮಮತಾ ಬ್ಯಾನರ್ಜಿ ವಿರುದ್ಧ ಅವರಿಗೆ ಯಾವುದೇ ಕೋಪಗಳಿಲ್ಲದಿದ್ದರೂ, ಸಂಕಷ್ಟದ ಕಾಲದಲ್ಲಿ ಎಐಐಎಂಐಎಂ ಮಾಡಿದ ಕಾರ್ಯಗಳು, ಅಸಾದುದ್ದೀನ್ ಒವೈಸಿ ಎತ್ತಿದ ಗಟ್ಟಿ ಧ್ವನಿಗಳು ಇನ್ನೂ ಮುಸ್ಲಿಮರ ಎದೆಯಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಹೀಗಾಗಿಯೇ ಬಿಹಾರ ಚುನಾವಣೆಯಲ್ಲಿ ಕೂಡ ಎಐಐಎಂಐಎಂ 5 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ಓವೈಸಿ ಸ್ಪರ್ಧೆಯ ಸೂಚನೆ ಸಿಗುತ್ತಿದ್ದಂತೆಯೇ ಇತ್ತ ಟಿಎಂಸಿಯಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಬಿಜೆಪಿಯಂತೆಯೇ ಎಐಐಎಂಐಎಂ ಕೂಡ ಒಂದು ಕೋಮುವಾದಿ ಶಕ್ತಿ. ಈ ಎರಡೂ ಪಕ್ಷಗಳು ವಿಭಜಕ ಪಕ್ಷಗಳಾಗಿ ರಾಜಕೀಯ ಮಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿಗೆ ಸಹಾಯ ಮಾಡಲು ಎಐಐಎಂನ್ನು ಕಣಕ್ಕಿಳಿಸಲಾಗಿದೆ ಎಂದು ಟಿಎಂಸಿಯ ಹಿರಿಯ ಮುಖಂಡ ಮತ್ತು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಆರೋಪಿಸಿದ್ದಾರೆ.

ಇನ್ನೂ  ರಾಜ್ಯ ಜಮಿಯತ್ ಉಲೆಮಾ-ಎ-ಹಿಂದ್ ಅಧ್ಯಕ್ಷ ಸಿದ್ದಿಕುಲ್ಲಾ ಚೌಧರಿ ಕೂಡ ಎಐಐಎಂಐಎಂ ವಿರುದ್ಧ ಅಭಿಪ್ರಾಯ ಮಂಡಿಸಿದ್ದು, ಮುಸ್ಲಿಮರು ಮುಂದಿನ ಚುನಾವಣೆಯಲ್ಲಿ ಎಐಐಎಂಐಎಂ ಜೊತೆಗೆ ಹೋಗುವುದಿಲ್ಲ.ಬಂಗಾಳದ ಮುಸ್ಲಿಮರು ರಾಜಕೀಯ ಪ್ರಜ್ಞೆಯುಳ್ಳವರು ಹೀಗಾಗಿ ಅವರು ಟಿಎಂಸಿಗೆ ಮತ ಹಾಕುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಐಐಎಂಐಎಂನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ ಎಂಬ ಟಿಎಂಸಿ ಹೇಳಿಕೆಯ ನಡುವೆ ಬಿಜೆಪಿ ತಿರುಗೇಟು ನೀಡಿದೆ. ನಮಗೆ ಬಂಗಾಳ ಚುನಾವಣೆಯಲ್ಲಿ ಗೆಲ್ಲಲು ಬಿ ಅಥವಾ ಸಿ ಟೀಮ್ ನ ಅಗತ್ಯವಿಲ್ಲ, ನಾವು ನಮ್ಮ ಸಾಮರ್ಥ್ಯ, ಅರ್ಹತೆಯ ಮೇಲೆ ಚುನಾವಣೆ ಗೆಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ