ಟರ್ಕಿಗೆ ಮತ್ತೊಂದು ಏಟು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ ಪೋರ್ಟ್(Celebi Aviation) ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ.
ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿ, ಡ್ರೋನ್ ದಾಳಿಗೆ ಕಾರಣವಾಗಿದ್ದ ಟರ್ಕಿ ವಿರುದ್ಧ ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಟರ್ಕಿಯ ಕಂಪನಿಗೆ ಬೆಂಗಳೂರಿನಲ್ಲಿಯೂ ಭಾರಿ ಹೊಡೆತ ನೀಡಿದಂತಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 500 ಕ್ಕೂ ಅಧಿಕ ಜನ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಇದೀಗ ಸೇವೆಗಳು ಸ್ಥಗಿತಗೊಂಡಿದ್ದರಿಂದ ಸಿಬ್ಬಂದಿ ತಡರಾತ್ರಿಯಿಂದ ಕೆಲಸವಿಲ್ಲದೆ ಖಾಲಿಯಾಗಿದ್ದಾರೆ. ಸೆಲೆಬಿ ಏವಿಯೇಷನ್ ನಿರ್ವಹಿಸುತ್ತಿದ್ದ ಕೆಲಸವನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದಾಗಿ ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD