ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ತಾಯಿ: ಇಬ್ಬರ ರಕ್ಷಣೆ, ಇಬ್ಬರು ನೀರುಪಾಲು
ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಭೀಕರ ಘಟನೆ ಸೋಮವಾರ ನಡೆದಿದೆ. ಧೈರ್ಯಶಾಲಿ ಯುವಕರ ಸಕಾಲಿಕ ಕಾರ್ಯಾಚರಣೆಯಿಂದ ತಾಯಿ ಹಾಗೂ 11 ತಿಂಗಳ ಮಗು ರಕ್ಷಣೆಯಾಗಿದ್ದರೆ, ಇಬ್ಬರು ಹೆಣ್ಣುಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಚಿತ್ರದುರ್ಗ ಮೂಲದ ಹಾಗೂ ಪ್ರಸ್ತುತ ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನೆಲೆಸಿದ್ದ ಭವಾನಿ ಎಂಬ ಮಹಿಳೆ, ಕುಟುಂಬದ ಕಲಹದಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ. ಅವರು ಶಿವಮೊಗ್ಗದ ಅರಕೆರೆ ದೇವಾಲಯದ ಪಕ್ಕದಲ್ಲಿರುವ ರೈಲ್ವೆ ಸೇತುವೆ ಮೇಲಿಂದ ಮಕ್ಕಳೊಂದಿಗೆ ನದಿಗೆ ಹಾರಿದ್ದರು. ಈ ದೃಶ್ಯವನ್ನು ಕಂಡ ತಕ್ಷಣವೇ ಸ್ಥಳದಲ್ಲಿದ್ದ ನವೀನ್ ಹಾಗೂ ದಾದಪೀರ್ ಎಂಬ ಯುವಕರು ತಮ್ಮ ಜೀವದ ಹಂಗು ತೊರೆದು ನದಿಗೆ ಧುಮುಕಿದ್ದಾರೆ. ಇವರಿಬ್ಬರ ಸಕಾಲಿಕ ಸಾಹಸದಿಂದ ತಾಯಿ ಭವಾನಿ ಹಾಗೂ 11 ತಿಂಗಳ ಗಂಡು ಮಗುವನ್ನು ಜೀವಂತವಾಗಿ ದಡಕ್ಕೆ ತರಲು ಸಾಧ್ಯವಾಯಿತು.
ರಕ್ಷಣೆಗೊಳಗಾದ ತಾಯಿ ಮತ್ತು ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ನದಿಯ ಪ್ರವಾಹ ತೀವ್ರವಾಗಿದ್ದರಿಂದ ಆಕೆಯ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ವಿಷಯ ತಿಳಿದ ಕೂಡಲೇ ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಮುಂದಾದರು. ನದಿಯಲ್ಲಿ ನೀರಿನ ಹರಿವು ಮತ್ತು ರಭಸ ಹೆಚ್ಚಾಗಿದ್ದರಿಂದ ಶೋಧ ಕಾರ್ಯವನ್ನು ಮುಂದುವರಿಸಲು ಸಾಧ್ಯವಾಗದೆ ಅವರು ವಾಪಸಾಗಬೇಕಾಯಿತು. ಘಟನಾ ಸ್ಥಳಕ್ಕೆ ಎಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಯುವಕ ದಾದಾಪೀರ್, ಸೇತುವೆ ಮೇಲಿಂದ ಮಹಿಳೆ ಮಕ್ಕಳೊಂದಿಗೆ ಹಾರಿದ್ದನ್ನು ಕಂಡು ತಕ್ಷಣ ನದಿಗೆ ಹಾರಿ ಇಬ್ಬರನ್ನು ಕಾಪಾಡಿದೆವು, ನಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಉಳಿದಿಬ್ಬರು ಮಕ್ಕಳನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























