ಪ್ರಿಯಕರನ ಜೊತೆ ಇರುವಾಗ ತಾತನಿಗೆ ಸಿಕ್ಕಿಬಿದ್ದ ಅಪ್ರಾಪ್ತ ಮೊಮ್ಮಗಳು: ಮುಂದೆ ನಡೆದದ್ದು ದುರಂತ!
ಉತ್ತರ ಪ್ರದೇಶ: ಇಲ್ಲಿನ ಝಾನ್ಸಿ (Jhansi) ಜಿಲ್ಲೆಯಲ್ಲಿ ಅತ್ಯಂತ ಕಳವಳಕಾರಿ ಮತ್ತು ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ತನ್ನ ಪ್ರಿಯಕರನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ 16 ವರ್ಷದ ಅನಾಥ ಬಾಲಕಿಯೊಬ್ಬಳು, ತನ್ನನ್ನು ಪ್ರಶ್ನಿಸಿದ 76 ವರ್ಷದ ತಾತನನ್ನು ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಛಿರೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವೃದ್ಧನ ಹೆಂಡತಿ (ಅಜ್ಜಿ) ದಿನಗೂಲಿ ಕೆಲಸಕ್ಕೆ ಹೋಗಿದ್ದಾಗ, ಮನೆಯಲ್ಲಿ ವೃದ್ಧ ಹಾಗೂ 16 ವರ್ಷದ ಮೊಮ್ಮಗಳು ಮಾತ್ರ ಇದ್ದರು. ಈ ವೇಳೆ ಬಾಲಕಿ ತನ್ನ 20 ವರ್ಷದ ಪ್ರಿಯಕರ ವಿಶಾಲ್ ಕುಶ್ವಾಹನನ್ನು ಮನೆಗೆ ಕರೆಸಿಕೊಂಡಿದ್ದಳು.
ಅದೇ ಸಮಯದಲ್ಲಿ ವೃದ್ಧ ತಾತ ಅನಿರೀಕ್ಷಿತವಾಗಿ ಮನೆಗೆ ವಾಪಸಾಗಿ, ಇಬ್ಬರನ್ನೂ ಅನುಮಾನಾಸ್ಪದ ಸ್ಥಿತಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಪ್ರಿಯಕರ ವಿಶಾಲ್ ವೃದ್ಧನ ಕುತ್ತಿಗೆಯನ್ನು ಹಿಸುಕಿದರೆ, ಬಾಲಕಿ ಮನೆಯಲ್ಲಿದ್ದ ಅಡುಗೆಯ ಚಕ್ಲಾ (ಚಪಾತಿ ಲಟ್ಟಿಸುವ ಮರದ ಹಲಗೆ) ತೆಗೆದುಕೊಂಡು ಆತನ ತಲೆಗೆ ಸರಣಿ ಹಲ್ಲೆ ನಡೆಸಿದ್ದಾಳೆ. ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆಯ ನಂತರ ಸಾಕ್ಷ್ಯ ಮರೆಮಾಚಲು ಇಬ್ಬರೂ ಸೇರಿ ವೃದ್ಧನ ಶವವನ್ನು ಮನೆಯ ಹಿಂದಿದ್ದ ಬಾವಿಗೆ ಎಸೆದಿದ್ದರು. ಮರುದಿನ ವೃದ್ಧ ನಾಪತ್ತೆಯಾಗಿದ್ದು, ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಮೊದಲು ಕುಟುಂಬಸ್ಥರು ಮದ್ಯದ ನಶೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಭಾವಿಸಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದರು.
ರಹಸ್ಯ ಬಯಲಾಗಿದ್ದು ಹೇಗೆ?
ಸೆಪ್ಟೆಂಬರ್ 15ರಂದು ಅಂತ್ಯಕ್ರಿಯೆಯ ನಂತರ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಕುಟುಂಬಸ್ಥರಿಗೆ ಬಾಲಕಿಯ ರಕ್ತಸಿಕ್ತ ಬಟ್ಟೆಗಳು ಸಿಕ್ಕಿವೆ. ಇದರಿಂದ ಅನುಮಾನಗೊಂಡು ಆಕೆಯನ್ನು ಕಠಿಣವಾಗಿ ವಿಚಾರಣೆ ನಡೆಸಿದಾಗ ಇಡೀ ಕೃತ್ಯದ ರಹಸ್ಯ ಬಹಿರಂಗಗೊಂಡಿದೆ.
ಬಾಲಕಿ ತಾತನ ಕೊಲೆಯಲ್ಲಿ ತನಗೂ ಹಾಗೂ ಪ್ರಿಯಕರನಿಗೂ ಇರುವ ಪಾತ್ರವನ್ನು ಒಪ್ಪಿಕೊಂಡಿದ್ದಾಳೆ. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕಿಯ ಪ್ರಿಯಕರ ವಿಶಾಲ್ ಕುಶ್ವಾಹನನ್ನು ಬಂಧಿಸಿ, ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕಿಯ ತಾಯಿ ಸುಮಾರು 10 ವರ್ಷಗಳ ಹಿಂದೆ ತೀರಿಕೊಂಡಿದ್ದರಿಂದ, ಅಜ್ಜಿ–ತಾತಂದಿರೆ ಈಕೆಯನ್ನು ಚಿಕ್ಕಂದಿನಿಂದಲೂ ಸಾಕಿ–ಸಲಹುತ್ತಿದ್ದರು. 10ನೇ ತರಗತಿ ಓದುತ್ತಿದ್ದ ಈ ಬಾಲಕಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಈಗ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























