ಒಳಸಂಚು ಹೇಳಿಕೆ: ಜಿ.ಪರಮೇಶ್ವರ್, ಖರ್ಗೆ ಸೋತಾಗ ಸಿದ್ದರಾಮಯ್ಯ ಯಾಕೆ ಮಾತನಾಡಲಿಲ್ಲ? | ಸಚಿವ ಈಶ್ವರಪ್ಪ ತಿರುಗೇಟು
19/12/2020
ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರು ಗುಂಪುಗಾರಿಕೆಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಅವರಿಂದಲೇ ಕಾಂಗ್ರೆಸ್ ಪಕ್ಷ ನಾಶವಾಗಲಿದೆ. ಅವರಿಗೆ ಪ್ರಬುದ್ಧ ರಾಜಕಾರಣಿಯ ಲಕ್ಷಣಗಳೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನ ಸೋಲಿಗೆ ಪಕ್ಷದ ಒಳಸಂಚು ಕಾರಣ ಎಂದು ನಿನ್ನೆಯಷ್ಟೆ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು. ಈ ಸಂಬಂಧ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯನವರು, ಜಿ.ಪರಮೇಶ್ವರ್, ಖರ್ಗೆ ಸೋತಾಗ ಯಾಕೆ ಇಂತಹ ಚರ್ಚೆಯನ್ನು ಮಾಡಲಿಲ್ಲ? ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯನವರು ತಮ್ಮ ಸೋಲಿಗೆ ಕಾರಣ ಯಾರು ಎಂದು ಹೆಸರು ಹೇಳಲಿ. ಆಗ ಎಲ್ಲವೂ ಬಯಲಾಗುತ್ತದೆ ಸಿದ್ದರಾಮಯ್ಯ ರಾಜ್ಯದ ದೊಡ್ಡ ಕುತಂತ್ರ ರಾಜಕಾರಣಿ ಎಂದ ಅವರು, ಯಾರೋ ಕಟ್ಟಿದ ಹುತ್ತದಲ್ಲಿ ಸಿದ್ದರಾಮಯ್ಯ ಹಾವಾಗಿ ವಾಸಿಸುತ್ತಿದ್ದಾರೆ ಎಂದು ಕುಟುಕಿದರು.