ವಿಧಾನ ಸೌಧದಲ್ಲಿ ಮತ್ತೊಮ್ಮೆ ಯತ್ನಾಳ್—ಸಿದ್ದರಾಮಯ್ಯ ಮುಖಾಮುಖಿ: ಟಿಪ್ಪು ಬಗ್ಗೆ ಭರ್ಜರಿ ಚರ್ಚೆ
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಧಾನ ಸೌಧದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದ ವೇಳೆ, ಸಿದ್ದರಾಮಯ್ಯ ಏಕಾಏಕಿ ಎದುರಾಗಿದ್ದು, ಈ ವೇಳೆ ಇಬ್ಬರ ನಡುವೆ ಸ್ವಾರಸ್ಯಕರ ಚರ್ಚೆ ಏರ್ಪಟ್ಟಿದೆ.
ಯತ್ನಾಳ್ ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದ ವೇಳೆ ಏಕಾಏಕಿ ಸಿದ್ದರಾಮಯ್ಯ ಎದುರಾಗಿದ್ದಾರೆ. ಯತ್ನಾಳ್ ಅವರನ್ನು ನೋಡುತ್ತಿದ್ದಂತೆಯೇ ಸಿದ್ದರಾಮಯ್ಯ ಸಲುಗೆಯಿಂದ ಬೆನ್ನು ತಟ್ಟಿದ್ದಾರೆ. ಸಿದ್ದರಾಮಯ್ಯನವರನ್ನು ನೋಡಿದ ಯತ್ನಾಳ್, ಸರ್.. ನಿಮ್ಮದೇ ವಿಷಯ ಮಾತನಾಡ್ತಿದ್ದೆ ಎಂದಿದ್ದಾರೆ.
ನನ್ ವಿಷಯ ಬಿಟ್ರೆ ನಿಮ್ಗೆ ಇನ್ನೇನಿದೆರೀ ಹೇಳೋಕೆ ಅಂತ ಸಿದ್ದರಾಮಯ್ಯ ನಕ್ಕಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಸರ್ ಬರೇ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡ್ತಾರೆ, ವೀರ ಸಾವರ್ಕರ್ ಬಗ್ಗೆ ವಿರೋಧ ಮಾಡ್ತಾರೆ ಅಂದಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಇಸ್ ಹಿಸ್ಟೋರಿಕಲ್ ಮ್ಯಾನ್. ಬ್ರಿಟೀಷ್ ವಿರುದ್ಧದ ಹೋರಾಟದ ಭಾಗವಾಗಿದ್ರು ಎಂದು ಉತ್ತರಿಸಿದ್ದಾರೆ.
ಸಿದ್ದರಾಮಯ್ಯನವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿದ್ದಾನೆ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನೋಡಪ್ಪಾ ಆ ಥರ ಬೇಕಾದಷ್ಟು ಮಾಡಿದ್ದಾರೆ. ಆದ್ರೆ, ಬ್ರಿಟೀಷರ ವಿರುದ್ಧ ಹೋರಾಡಿದವರಲ್ವಾ? ನಾವ್ಯಾಕೆ ಕಿತ್ತೂರಿ ರಾಣಿ ಚೆನ್ನಮ್ಮ ಅವರಿಗೆ ಗೌರವದಿಂದ ನಡೆದುಕೊಳ್ಳುತ್ತೇವೆ, ಅವರು ಬ್ರಿಟೀಷರ ವಿರುದ್ಧದ ಹೋರಾಟದ ಭಾಗವಾಗಿದ್ರು ಎಂದು ಯತ್ನಾಳ್ ಗೆ ಅರ್ಥೈಸಿದರು.
ಈ ವೇಳೆ ಸಿದ್ದರಾಮಯ್ಯ ಮಾತಿಗೆ ಸುಮ್ಮನಾದ ಯತ್ನಾಳ್ ಅವರು, ಸರ್ ನಾವು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರದ್ದು ಇದು(ಪ್ರತಿಮೆ) ಮಾಡ್ತಿವಿ ಸರ್ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಮಾಡ್ಸಿ ಒಳ್ಳೆಯದಾಗಲಿ ಎಂದು ಸ್ಥಳದಿಂದ ತೆರಳಿದರು.
ಯತ್ನಾಳ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡುವಾಗೆಲ್ಲ ಸಿದ್ದರಾಮಯ್ಯ ಏಕಾಏಕಿ ಎದುರಾಗುತ್ತಿದ್ದಾರೆ. ಈ ಹಿಂದೊಮ್ಮೆ ವಿಧಾನ ಸೌಧದ ಮುಂದೆ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಹೇಳಿಕೆ ನೀಡುತ್ತಿದ್ದ ವೇಳೆ ಸಿದ್ದರಾಮಯ್ಯ ಏಕಾಏಕಿ ಎದುರಾಗಿದ್ದರು. ಈ ವೇಳೆ ಯತ್ನಾಳ್ ಅವರು ಪ್ರತಿಕ್ರಿಯೆ ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಿಂದ ತೆರಳಿದ್ದರು. ಇದೀಗ ಮತ್ತೊಮ್ಮೆ ಇಬ್ಬರೂ ಮುಖಾಮುಖಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka