ಬಾಂಗ್ಲಾದೇಶದ ಗಡೀಪಾರು ಲೇಖಕಿ ತಸ್ಲಿಮಾ ನಸ್ರಿನ್ 19 ವರ್ಷಗಳ ಬಳಿಕ ಕೋಲ್ಕತ್ತಾಗೆ ವಾಪಸ್! - Mahanayaka

ಬಾಂಗ್ಲಾದೇಶದ ಗಡೀಪಾರು ಲೇಖಕಿ ತಸ್ಲಿಮಾ ನಸ್ರಿನ್ 19 ವರ್ಷಗಳ ಬಳಿಕ ಕೋಲ್ಕತ್ತಾಗೆ ವಾಪಸ್!

taslima nasreen
31/07/2026

ಬಾಂಗ್ಲಾದೇಶದ ಖ್ಯಾತ ಲೇಖಕಿ ಹಾಗೂ ಕಾರ್ಯಕರ್ತೆ ತಸ್ಲಿಮಾ ನಸ್ರಿನ್ ಅವರು ಸುಮಾರು ಎರಡು ದಶಕಗಳ (19 ವರ್ಷಗಳ) ಬಳಿಕ ಶುಕ್ರವಾರ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರಕ್ಕೆ ಮರಳಿದ್ದಾರೆ. ತಮ್ಮ ಮೆಚ್ಚಿನ ನಗರಕ್ಕೆ ಮರಳಿರುವುದು ತಮಗೆ ತಾಯ್ನಾಡಿಗೆ ಮರಳಿದಷ್ಟೇ ಭಾವನಾತ್ಮಕ ಅನುಭವ ನೀಡಿದೆ ಎಂದು ಅವರು ಬಣ್ಣಿಸಿದ್ದಾರೆ.

ಐತಿಹಾಸಿಕ ವಾಪಸಾತಿ: ತಮ್ಮ ಆತ್ಮಚರಿತ್ರೆ ‘ದ್ವಿಖಂಡಿತ’ (Dwikhandito) ಕೃತಿಯ ವಿವಾದ ಮತ್ತು ವ್ಯಾಪಕ ಪ್ರತಿಭಟನೆಗಳ ಬಳಿಕ 2007ರಲ್ಲಿ ಕೋಲ್ಕತ್ತಾವನ್ನು ತೊರೆಯುವಂತೆ ಬಲವಂತ ಮಾಡಲಾಗಿತ್ತು. ಇದೀಗ 19 ವರ್ಷಗಳ ಸುಧೀರ್ಘ విరాಮದ ನಂತರ ಅವರು ಕೋಲ್ಕತ್ತಾಗೆ ಸಾರ್ವಜನಿಕವಾಗಿ ಆಗಮಿಸಿದ್ದಾರೆ.

ಆಗಸ್ಟ್ 1ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ತಸ್ಲಿಮಾ ನಸ್ರಿನ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೆಂದು ಅಧಿಕಾರಿ ಮತ್ತು ಖ್ಯಾತ ಲೇಖಕ ಶೀರ್ಷೇಂದು ಮುಖೋಪಾಧ್ಯಾಯ ಅವರೊಂದಿಗೆ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.

2000ರ ದಶಕದ ಆರಂಭದಲ್ಲಿ ಬಾಂಗ್ಲಾದೇಶದಿಂದ ಬಂದು ಕೋಲ್ಕತ್ತಾವನ್ನೇ ನೆಲೆಸಿಕೊಂಡಿದ್ದ ತಸ್ಲಿಮಾ ಅವರ ‘ದ್ವಿಖಂಡಿತ’ ಪುಸ್ತಕವು ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ, 2003ರಲ್ಲಿ ಅಂದಿನ ಸರ್ಕಾರವು ಆ ಪುಸ್ತಕ ನಿಷೇಧಿಸಿತ್ತು ಹಾಗೂ ನಂತರ ಅವರನ್ನು ನಗರದಿಂದ ಕಳುಹಿಸಲಾಗಿತ್ತು.

ಕೋಲ್ಕತ್ತಾಗೆ ಮರಳಿರುವ ತಸ್ಲಿಮಾ ನಸ್ರಿನ್, ಇದು ನನಗೆ ಅತಿ ಹತ್ತಿರವಾದ ಸ್ಥಳವಾಗಿದ್ದು, ಕಳೆದು ಹೋದ ಆ ದಿನಗಳನ್ನು ಯಾರೂ ಮರಳಿಸಲು ಸಾಧ್ಯವಿಲ್ಲವಾದರೂ, ತವರು ನೆಲಕ್ಕೆ ಬಂದಂತ ಸಂತಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ