60 ವರ್ಷ ಮೇಲ್ಪಟ್ಟ ವಿದೇಶಿ ಉದ್ಯೋಗಿಗಳಿಗೆ ಹೊಸ ವರ್ಕ್ ಪರ್ಮಿಟ್ ಹಾಗೂ ವೀಸಾ ನವೀಕರಣ ಸ್ಥಗಿತಗೊಳಿಸಿದ ಓಮಾನ್ - Mahanayaka

60 ವರ್ಷ ಮೇಲ್ಪಟ್ಟ ವಿದೇಶಿ ಉದ್ಯೋಗಿಗಳಿಗೆ ಹೊಸ ವರ್ಕ್ ಪರ್ಮಿಟ್ ಹಾಗೂ ವೀಸಾ ನವೀಕರಣ ಸ್ಥಗಿತಗೊಳಿಸಿದ ಓಮಾನ್

oman
24/08/2026

ಮಸ್ಕತ್ (ಓಮಾನ್): ಗಲ್ಫ್ ರಾಷ್ಟ್ರ ಓಮಾನ್ ವಿದೇಶಿ ಉದ್ಯೋಗಿಗಳಿಗೆ (Expatriate workers) ಸಂಬಂಧಿಸಿದಂತೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವಿದೇಶಿ ಕಾರ್ಮಿಕರಿಗೆ ಹೊಸ ವರ್ಕ್ ಪರ್ಮಿಟ್ ನೀಡುವಿಕೆ ಹಾಗೂ ಚಾಲ್ತಿಯಲ್ಲಿರುವ ವೀಸಾಗಳನ್ನು ನವೀಕರಿಸುವುದನ್ನು ಸ್ಥಗಿತಗೊಳಿಸಿದೆ.

ಈ ಹಿಂದೆ ಜಾರಿಯಲ್ಲಿದ್ದ ನಿಯಮಗಳ ಆಧಾರದ ಮೇಲೆ 60 ವರ್ಷ ವಯಸ್ಸು ದಾಟಿದ ನಂತರವೂ ಓಮಾನ್ ನಲ್ಲಿ ಸೇವೆ ಮುಂದುವರಿಸಿದ್ದ ವಿದೇಶಿ ಉದ್ಯೋಗಿಗಳ ಮೇಲೆಯೂ ಈ ನೂತನ ಕ್ರಮ ನೇರ ಪರಿಣಾಮ ಬೀರಲಿದೆ.

ಇತ್ತೀಚೆಗೆ 60 ವರ್ಷ ದಾಟಿದ ತಮ್ಮ ಉದ್ಯೋಗಿಗಳ ವೀಸಾ ಹಾಗೂ ವರ್ಕ್ ಪರ್ಮಿಟ್ ನವೀಕರಣಕ್ಕಾಗಿ ಕಂಪನಿಗಳು ಮತ್ತು ಉದ್ಯೋಗದಾತರು ಓಮಾನ್ ಉದ್ಯೋಗ ಸಚಿವಾಲಯವನ್ನು (Ministry of Labour) ಸಂಪರ್ಕಿಸಿದಾಗ, ಆ ಅರ್ಜಿಗಳನ್ನು ಸಚಿವಾಲಯ ತಿರಸ್ಕರಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

2022 ರ ಜನವರಿಯಲ್ಲಿ ಓಮಾನ್ ಸರ್ಕಾರವು ವಿದೇಶಿ ಉದ್ಯೋಗಿಗಳ ವರ್ಕ್ ಪರ್ಮಿಟ್ ಗೆ ಇದ್ದ 60 ವರ್ಷಗಳ ವಯೋಮಿತಿಯ ನಿರ್ಬಂಧವನ್ನು ತೆರವುಗೊಳಿಸಿತ್ತು. ಇದರಿಂದಾಗಿ ಖಾಸಗಿ ವಲಯದ ಸಂಸ್ಥೆಗಳಿಗೆ ಅನುಭವಿ ವಿದೇಶಿ ನೌಕರರನ್ನು 60 ವರ್ಷಗಳ ನಂತರವೂ ಕೆಲಸದಲ್ಲಿ ಇರಿಸಿಕೊಳ್ಳಲು ಅವಕಾಶ ದೊರೆತಿತ್ತು. ಆದರೆ ಪ್ರಸ್ತುತ ಈ ನೀತಿಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ವೀಸಾ ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಭಾರತೀಯರು ಸೇರಿದಂತೆ ಹಲವು ಪ್ರವಾಸಿ ಉದ್ಯೋಗಿಗಳು ತಮ್ಮ ಉದ್ಯೋಗ ಮತ್ತು ವಾಸ್ತವ್ಯದ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಚಿವಾಲಯದಿಂದ ಅಧಿಕೃತ ವಿವರಗಳು ಹೊರಬೀಳಬೇಕಿದ್ದರೂ, ವೀಸಾ ನವೀಕರಣ ಸಿಗದ ಕಾರಣ ಹಲವು ಹಿರಿಯ ಉದ್ಯೋಗಿಗಳು ತಾಯ್ನಾಡಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಚಾಲ್ತಿಯಲ್ಲಿರುವ ವರ್ಕ್ ಪರ್ಮಿಟ್ ಇಲ್ಲದೆ ದೇಶದಲ್ಲಿ ಮುಂದುವರಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi