ಮಾತು ತಪ್ಪಿದ ಕೇಂದ್ರ ಸರ್ಕಾರ: ಸೆ.5ರಂದು ಇಂಡಿಯಾ ಗೇಟ್‌ ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ CJP ಯುವ ಮಾರ್ಚ್ - Mahanayaka

ಮಾತು ತಪ್ಪಿದ ಕೇಂದ್ರ ಸರ್ಕಾರ: ಸೆ.5ರಂದು ಇಂಡಿಯಾ ಗೇಟ್‌ ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ CJP ಯುವ ಮಾರ್ಚ್

cockroach party
25/08/2026

ಹೊಸದಿಲ್ಲಿ: ಜುಲೈ 25 ರಂದು ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ‘ಕಾಕ್‌ ರೋಚ್ ಜನತಾ ಪಾರ್ಟಿ’ (CJP) ಸೆಪ್ಟೆಂಬರ್ 5 ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೃಹತ್ ಯುವ ಜಾಗೃತಿ ಹಾಗೂ ಪ್ರತಿಭಟನಾ ಮೆರವಣಿಗೆಯನ್ನು ಘೋಷಿಸಿದೆ.

ಈ ಶಾಂತಿಯುತ ಮೆರವಣಿಗೆಯು ದೆಹಲಿಯ ಇಂಡಿಯಾ ಗೇಟ್‌ನಿಂದ ಪ್ರಾರಂಭವಾಗಿ ಹೊಸ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಸಾಗಲಿದೆ. ನೀಟ್ ಪರೀಕ್ಷೆಯ ಅಕ್ರಮದ ಬಳಿಕ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಈ ಪ್ರತಿಭಟನೆಯ ಮುಂಚೂಣಿಯಲ್ಲಿರಲಿದ್ದು, ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು ಭಾಗವಹಿಸುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ, ನೀಟ್–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ CJP ಜಂತರ್ ಮಂತರ್‌ ನಲ್ಲಿ 37 ದಿನಗಳ ಕಾಲ ಸುದೀರ್ಘ ಪ್ರತಿಭಟನೆ ನಡೆಸಿತ್ತು. ಈ ಹೋರಾಟಕ್ಕೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಜುಲೈ 25 ರಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗಿನ ಮಾತುಕತೆಯ ನಂತರ, ವಿದ್ಯಾರ್ಥಿಗಳ ಮೇಲಿನ ಎಫ್‌ ಐಆರ್‌ ಗಳನ್ನು ಹಿಂಪಡೆಯುವುದು ಮತ್ತು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತ್ತು. ಸರ್ಕಾರದ ಭರವಸೆಯ ಮೇರೆಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.

ಆದರೆ, ಭರವಸೆ ನೀಡಿ ತಿಂಗಳು ಕಳೆದರೂ ಸರ್ಕಾರ ಎಫ್‌ ಐಆರ್‌ ಗಳನ್ನು ಹಿಂಪಡೆಯಲು ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಮತ್ತು ವಿಳಂಬ ನೀತಿ ಅನುಸರಿಸುತ್ತಿದೆ ಎಂದು CJP ಯ ರಾಷ್ಟ್ರೀಯ ಕಾರ್ಯಾಚರಣೆ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು ಹಾಗೂ ದೇಶದ ಯುವಜನತೆಯ ನಂಬಿಕೆಗೆ ಸರ್ಕಾರ ಧಕ್ಕೆ ತರುತ್ತಿದೆ ಎಂದು ಸಂಘಟನೆ ತಿಳಿಸಿದೆ. ಆ ಕಾರಣದಿಂದಲೇ ಸೆಪ್ಟೆಂಬರ್ 5 ರಂದು ಶಾಂತಿಯುತ ಮೆರವಣಿಗೆಯ ಮೂಲಕ ಮತ್ತೆ ರಸ್ತೆಗಿಳಿದು ಹೋರಾಟ ಮುಂದುವರಿಸಲು ನಿರ್ಧರಿಸಿರುವುದಾಗಿ CJP ಸ್ಪಷ್ಟಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi