ಐಫೋನ್ ಜಗಳದಿಂದಾಗಿ ಈ ಮೂವರು ಸಾವನ್ನಪ್ಪಿಲ್ಲ: ಮತ್ತೇನು ಕಾರಣ?
ಮಹಾರಾಷ್ಟ್ರ: ಇಲ್ಲಿನ ಛತ್ರಪತಿ ಸಂಭಾಜಿನಗರದಲ್ಲಿ (ಔರಂಗಾಬಾದ್) ನಡೆದ ಅತ್ಯಂತ ದುರಂತದ ಕಣಿವೆ (Cliff) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬದ ಕುರಿತು ಹರಿದಾಡುತ್ತಿರುವ ವಂದಂತಿಗಳಿಗೆ ಮೃತನ ಅತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಐಫೋನ್ (iPhone) ಕಾರಣಕ್ಕೆ ಈ ದುರಂತ ಸಂಭವಿಸಿದೆ ಎಂಬ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಕಳೆದ ಶುಕ್ರವಾರದಂದು ‘ಖಾವ್ಡ್ಯಾ ಡೊಂಗರ್’ (Khavdya Dongar) ಕಣಿವೆಯಿಂದ ಬಿದ್ದು ಸಾವನ್ನಪ್ಪಿದ 18 ವರ್ಷದ NEET ಆಕಾಂಕ್ಷಿ ಕುನಾಲ್ ಚಾಂದ್‌ಗುಡೆ ಹಾಗೂ ಆತನ ತಂದೆ–ತಾಯಿಯ ಸಾವಿನ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಐಫೋನ್ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಆತ್ಮಹತ್ಯೆ/ದುರಂತ ನಡೆದಿದೆ ಎಂದು ತಪ್ಪಾದ ಸುದ್ದಿಗಳು ಹರಿದಾಡುತ್ತಿವೆ.
ಮೃತನ ತಾಯಿ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಈ ಕುರಿತು ಒಂದು ಭಾವನಾತ್ಮಕ ವಿಡಿಯೋ ಬಿಡುಗಡೆ ಮಾಡಿದ್ದು, “ಯಾವುದೇ ಸರಿಯಾದ ಮಾಹಿತಿ ಇಲ್ಲದೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ವ್ಯೂವ್ಸ್ ಮತ್ತು ಲೈಕ್ಸ್ ಗಾಗಿ ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ಕಲ್ಪಿಸಿಕೊಂಡು ವಿಡಿಯೋ ಮಾಡಲಾಗುತ್ತಿದೆ” ಎಂದು ಮನವಿ ಮಾಡಿದ್ದಾರೆ.
ತಮ್ಮ ಕುಟುಂಬದ ಮೂವರು ಸದಸ್ಯರನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ಶವದ ಬೂದಿ ಸಂಗ್ರಹಿಸಲು ಹೋಗುವಾಗಲೂ ಮೊಬೈಲ್ ನಲ್ಲಿ ಇಂತಹ ಸುಳ್ಳು ವಿಡಿಯೋಗಳು ಬರುತ್ತಿರುವುದನ್ನು ನೋಡಿ ನಮ್ಮ ಹೃದಯ ಚುಮುಗುಟ್ಟಿದೆ ಎಂದು ಪಲ್ಲವಿ ಪಾಟೀಲ್ ಕಣ್ಣೀರಿಟ್ಟಿದ್ದಾರೆ.
ಈ ದುರಂತದ ಹಿಂದೆ ಕೇವಲ ಐಫೋನ್ ಮಾತ್ರವಲ್ಲದೆ, ಕುಟುಂಬದ ಆಳವಾದ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಕೌಟುಂಬಿಕ ಕಲಹಗಳೇ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಸಿಪಿ (ವಲಯ-ಐ) ಪಂಕಜ್ ಅತುಲ್ಕರ್ ತಿಳಿಸಿದ್ದಾರೆ. ಕಳೆದ ವರ್ಷವೂ ಕುನಾಲ್ ಐಫೋನ್ ವಿಚಾರವಾಗಿ ಇದೇ ಕಣಿವೆಗೆ ಬಂದು ಗಲಾಟೆ ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪೂರ್ಣ ಹಾಗೂ ಪರಿಶೀಲಿಸದ ವಂದಂತಿಗಳಿಂದ ಮೃತರ ಕುಟುಂಬಕ್ಕೆ ಮತ್ತಷ್ಟು ಮಾನಸಿಕ ವೇದನೆ ಉಂಟಾಗುತ್ತಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಕಣ್ಣೀರಿನ ಮನವಿ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























