ಉಪ್ಪಿನಂಗಡಿ: ಕಂದಮ್ಮಗಳನ್ನು ಬಾವಿಗೆಸೆದ ತಾಯಿ; ಓರ್ವ ಮಗು ಸಾವು, ಮತ್ತೊಂದರ ಸ್ಥಿತಿ ಗಂಭೀರ
ಉಪ್ಪಿನಂಗಡಿ: ಫೋನ್ನಲ್ಲಿ ಪತಿಯೊಂದಿಗೆ ನಡೆದ ವೈವಾಹಿಕ ಕಲಹದಿಂದ ಕೋಪಗೊಂಡ ಮಹಿಳೆಯೊಬ್ಬಳು ತನ್ನ ಹಾಗೂ ನಾದಿನಿಯ ಕಂದಮ್ಮಗಳನ್ನು ಬಾವಿಗೆ ಎಸೆದ ದಾರುಣ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆಯ ಮೈರಕಟ್ಟೆಯಲ್ಲಿ ಸೆಪ್ಟೆಂಬರ್ 19ರ ಮಧ್ಯಾಹ್ನ ನಡೆದಿದೆ.
ಈ ಘಟನೆಯಲ್ಲಿ ಮೂರು ವರ್ಷದ ಗಂಡು ಮಗು ಮೃತಪಟ್ಟಿದ್ದು, ಇನ್ನೊಂದು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ನಿವಾಸಿ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಫೋನ್ ಕರೆಯಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ತನ್ನ ಗಂಡನ ತಂಗಿಯ ಸುಮಾರು ಮೂರು ವರ್ಷದ ಗಂಡು ಮಗುವನ್ನು ಮನೆ ಸಮೀಪದ ಬಾವಿಗೆ ಎಸೆದಿದ್ದಾಳೆ. ಮೊದಲು ನಾದಿನಿಯ ಮಗುವನ್ನು ಬಾವಿಗೆ ಎಸೆದ ನೂರುನ್ನಿಸಾ, ಬಳಿಕ ತನ್ನ ಮಗುವನ್ನೂ ಎಸೆಯುವುದನ್ನು ಕಂಡ ಪತಿಯ ತಂಗಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಹಾಗೂ ಹತ್ತಿರದ ಹೋಟೆಲ್ ಸಿಬ್ಬಂದಿ ಮಕ್ಕಳನ್ನು ಮೇಲೆತ್ತಿದ್ದಾರೆ. ದುರದೃಷ್ಟವಶಾತ್, ನೂರುನ್ನಿಸಾಳ ನಾದಿನಿಯ ಮಗು ರಾಬೀಹ್ ಅಷ್ಟರಲ್ಲಾಗಲೇ ಮೃತಪಟ್ಟಿತ್ತು. ನೂರುನ್ನಿಸಾಳ ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ, ಮೊದಲೆರಡು ಮಕ್ಕಳನ್ನು ಬಾವಿಗೆ ಎಸೆದ ಬಳಿಕ ಆರೋಪಿ ನೂರುನ್ನಿಸಾ ತನ್ನ ಆರು ತಿಂಗಳ ಹಸುಳೆಯನ್ನೂ ಬಾವಿಗೆ ಎಸೆಯಲು ಕರೆತಂದಿದ್ದಳು. ಆದರೆ, ತಕ್ಷಣವೇ ಜಾಗರೂಕರಾದ ಸ್ಥಳೀಯರು ಆಕೆಯ ಕೈಯಿಂದ ಹಸುಳೆಯನ್ನು ಕಿತ್ತುಕೊಂಡು ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಮ್ಮಗಳನ್ನು ಬಾವಿಗೆ ಎಸೆದ ಬಳಿಕ ನೂರುನ್ನಿಸಾ ತನ್ನ ತಾಯಿ ಹಾಗೂ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಘಟನೆ ನಡೆದ ನಂತರವೂ ಆಕೆಯ ಮುಖದಲ್ಲಿ ಯಾವುದೇ ಪಾಪಪ್ರಜ್ಞೆ ಕಾಣಿಸುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನೂರುನ್ನಿಸಾಳ ಪತಿ ಸಿನಾನ್ ಮಂಗಳೂರಿನಲ್ಲಿ ಗ್ಯಾರೇಜ್ ನಡೆಸುತ್ತಿದ್ದು, ಘಟನೆ ನಡೆದಾಗ ಅವರು ಮನೆಯಲ್ಲಿರಲಿಲ್ಲ. ಇವರಿಬ್ಬರು ಈ ಹಿಂದೆ ಅನ್ನೋನ್ಯವಾಗಿಯೇ ಇದ್ದರು ಎಂದು ಸ್ಥಳೀಯರು ಹೇಳಿದ್ದು, ಏಕಾಏಕಿ ಈ ರೀತಿ ಕೃತ್ಯ ಎಸಗಲು ಆಕೆಗೆ ಕಾಡುತ್ತಿರುವ ಮಾನಸಿಕ ತೊಡಕುಗಳೇನಾದರೂ ಕಾರಣವೇ ಎಂಬ ಸಂಶಯ ವ್ಯಕ್ತವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ. 121/2026) ದಾಖಲಾಗಿದ್ದು, ಆರೋಪಿ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.




























