ಪಟಾಕಿ ಸಂಪೂರ್ಣ ನಿಷೇಧದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಬಹುದು: ಸುಪ್ರೀಂ ಕೋರ್ಟ್
ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಹಾಗೂ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ ದಿನದ 24 ಗಂಟೆಗಳ ಕಾಲ ಪಟಾಕಿ ಸಿಡಿಸಲು ಮುಕ್ತ ಅವಕಾಶ ನೀಡುವುದಿಲ್ಲ ಎಂದೂ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ವಿಚಾರಣೆ ನಡೆಸಿತು. ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವು ದೀಪಾವಳಿ ಆಚರಿಸುವ ಜನರ ಭಾವನೆಗಳಿಗೆ ಧಕ್ಕೆ ತರಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಹಬ್ಬದ ಸಂಭ್ರಮದ ಹೆಸರಿನಲ್ಲಿ ದಿನವಿಡೀ ಅಥವಾ 24 ಗಂಟೆಗಳ ಕಾಲ ಪಟಾಕಿ ಸಿಡಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ದಿನವಿಡೀ ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರ ಮೇಲೆ, ವಿಶೇಷವಾಗಿ ಹಿರಿಯ ನಾಗರಿಕರು, ರೋಗಿಗಳು ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ ನ್ಯಾಯಾಲಯ, ಹಬ್ಬದ ಅವಧಿಯಲ್ಲಿ ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಮೂಲಕ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಬೇರಿಯಂ ಆಧಾರಿತ ಪಟಾಕಿಗಳ ಬಳಕೆಯ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿಕ್ರಿಯೆಯನ್ನು ದಾಖಲಿಸಲು ಅಕ್ಟೋಬರ್ 15ರವರೆಗೆ ಕಾಲಾವಕಾಶ ಕೋರಿದರು. ಬೇರಿಯಂ ಆಧಾರಿತ ಪಟಾಕಿಗಳ ಹೊರಾಂಗಣ ಪರೀಕ್ಷೆ ಇನ್ನೂ ನಡೆಯಬೇಕಿದೆ ಎಂದು ಅವರು ವಿವರಿಸಿದರು. ಅಲ್ಲದೆ, ಒಂದೇ ಬತ್ತಿಗೆ ಜೋಡಿಸಲಾದ ಪ್ರತ್ಯೇಕ ಪಟಾಕಿಗಳ ಸರಮಾಲೆಯಂತಿರುವ ಪಟಾಕಿಗಳನ್ನು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಬಳಸಲು ಅನುಮತಿಸಬಹುದೆಂಬ ಸಲಹೆಯನ್ನು ನ್ಯಾಯಪೀಠ ಪರಿಗಣಿಸುವುದಾಗಿ ತಿಳಿಸಿದೆ.
ಈ ಸಂದರ್ಭದಲ್ಲಿ ವಾಯುಮಾಲಿನ್ಯದ ವಿಷಯವನ್ನು ಪ್ರಸ್ತಾಪಿಸಿದ ವಕೀಲರೊಬ್ಬರು, ದೀಪಾವಳಿ ಸಂದರ್ಭದಲ್ಲಿ ಕೇವಲ ಪಟಾಕಿಗಳಷ್ಟೇ ಅಲ್ಲದೆ ಬೆಳೆಗಳ ತ್ಯಾಜ್ಯ ಸುಡುವ ಪ್ರಕ್ರಿಯೆಯೂ ನಡೆಯುತ್ತದೆ ಎಂದು ವಾದಿಸಿದರು. ಅಕ್ಟೋಬರ್ನಿಂದ ಜನವರಿ ಅವಧಿಯಲ್ಲಿ ವಾಯುಮಾಲಿನ್ಯದಿಂದ ಬಾಧಿತವಾಗುವ ದೆಹಲಿ ಮತ್ತು ಇತರೆ ರಾಜ್ಯಗಳಲ್ಲಿ ಪಟಾಕಿಗಳ ಬಳಕೆಯ ಮೇಲಿನ ನಿರ್ಬಂಧದ ಕುರಿತಾದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತುಗಳನ್ನು ಆಡಿದೆ. ಒಟ್ಟಿನಲ್ಲಿ ಪಟಾಕಿಗಳ ಅನಿಯಂತ್ರಿತ ಬಳಕೆಗೆ ಅವಕಾಶ ನೀಡದೆ, ಹಬ್ಬದ ಅವಧಿಯಲ್ಲಿ ನಿರ್ದಿಷ್ಟ ನಿಯಮಗಳು ಮತ್ತು ಸಮಯದ ಚೌಕಟ್ಟಿನಲ್ಲಿ ಹಸಿರು ಪಟಾಕಿಗಳ ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಲಯ ಚಿಂತನೆ ನಡೆಸಿದೆ.




























