ದೆವ್ವ ಬಿಡಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ: ತಲೆಮರೆಸಿಕೊಂಡಿದ್ದ ಆರೋಪಿ ಸತೀಶ್ ಪಾತ್ರಿ ಬೆಂಗಳೂರಿನಲ್ಲಿ ಬಂಧನ!
ಚಿಕ್ಕಮಗಳೂರು: ದೆವ್ವ ಹಾಗೂ ಭೂತ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿ, ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸತೀಶ್ ಪಾತ್ರಿಯನ್ನು ಪೊಲೀಸರು ಕೊನೆಗೂ ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು.
ಹಾಸನ ಮೂಲದ ಸಂತ್ರಸ್ತ ಮಹಿಳೆಗೆ ದೆವ್ವ ಬಿಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಈತನ ಮೇಲಿದೆ. ಜೊತೆಗೆ, ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಯುವಂತೆ ಕಿರುಕುಳ ನೀಡಿದ ಆರೋಪವೂ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಕೊಪ್ಪ ಹಾಗೂ ಎನ್.ಆರ್.ಪುರ ಪೊಲೀಸ್ ಠಾಣೆಗಳಲ್ಲಿ ಅತ್ಯಾಚಾರ ಮತ್ತು ಮೂಢನಂಬಿಕೆ ನಿಷೇಧ (ಬ್ಲಾಕ್ ಮ್ಯಾಜಿಕ್) ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸತೀಶ್ ಪಾತ್ರಿಗೆ ಎನ್.ಆರ್.ಪುರ ಠಾಣೆಯ ಪೊಲೀಸ್ ಪೇದೆ ಕಾಂತೇಶ್ ಎಂಬಾತನೇ ಪೊಲೀಸರ ಚಲನವಲನದ ಮಾಹಿತಿ ನೀಡುತ್ತಿದ್ದ ವಿಚಾರ ಬಯಲಾಗಿದೆ. ಪೊಲೀಸರು ದಾಳಿ ನಡೆಸುವ ಮುನ್ನವೇ ಸತೀಶ್ ಜಾಗ ಬದಲಾಯಿಸಲು ಈ ಮಾಹಿತಿಯೇ ಕಾರಣವಾಗಿತ್ತು. ಈ ಕರ್ತವ್ಯಲೋಪಕ್ಕಾಗಿ ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಪೇದೆ ಕಾಂತೇಶ್ ನನ್ನು ಅಮಾನತುಗೊಳಿಸಿದ್ದು, ಇದೀಗ ಬಂಧಿತ ಆರೋಪಿ ಸತೀಶ್ ಪಾತ್ರಿಯ ವಿರುದ್ಧ ಕೊಪ್ಪ ಹಾಗೂ ಎನ್.ಆರ್.ಪುರ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




























