ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ತಿರಸ್ಕಾರ: ಶಾಸಕ ಭರತ್ ಶೆಟ್ಟಿ ನೇರಹೊಣೆ: ಮುನೀರ್ ಕಾಟಿಪಳ್ಳ ಆರೋಪ - Mahanayaka

ಸುರತ್ಕಲ್ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ತಿರಸ್ಕಾರ: ಶಾಸಕ ಭರತ್ ಶೆಟ್ಟಿ ನೇರಹೊಣೆ: ಮುನೀರ್ ಕಾಟಿಪಳ್ಳ ಆರೋಪ

surathkal.jpg
17/06/2026

ಸುರತ್ಕಲ್: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಿರುವುದಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅವರೇ ನೇರ ಹೊಣೆ ಎಂದು ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ಯ ಜಿಲ್ಲಾ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶವನ್ನು ವಿರೋಧಿಸಿ ಮತ್ತು ಸುರತ್ಕಲ್ ಹೋಬಳಿಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಬೃಹತ್ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು. ಸುರತ್ಕಲ್ ವ್ಯಾಪ್ತಿಯ ಹಲವು ಸಂಘ ಸಂಸ್ಥೆಗಳು ಈ ಪ್ರತಿಭಟನೆಯಲ್ಲಿ ಕೈಜೋಡಿಸಿದವು.‌

ಮಾನವ ಸರಪಳಿಗೂ ಮುನ್ನ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗಾಗಿ ಕಳೆದ ಎರಡು‌ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳಿಗೆ ಖಾಸಗಿ ಆರೋಗ್ಯ ಲಾಬಿಗಳ ಹಿತಾಸಕ್ತಿಗಳೇ ಮುಖ್ಯವಾಗುತ್ತಿವೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆಸ್ಪತ್ರೆಗಳು ವೈದ್ಯರಿಲ್ಲದೆ ಬಿಕೋ ಎನ್ನುತ್ತಿದ್ದು, ಇದೇ ನೆಪವನ್ನು ಮುಂದಿಟ್ಟುಕೊಂಡು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಸಚಿವರು ಸ್ವತಃ ಖಾಸಗಿ ಲಾಬಿಗಳ ಪರ ವಹಿಸಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಸರ್ಕಾರದ ಪಟ್ಟಿಯಲ್ಲಿತ್ತು. ಸುರತ್ಕಲ್ ನಾಗರಿಕರು ಇದರ ಆದೇಶದ ನಿರೀಕ್ಷೆಯಲ್ಲಿದ್ದಾಗ ಸರ್ಕಾರ ಈ ಪ್ರಸ್ತಾಪವನ್ನೇ ತಿರಸ್ಕರಿಸಿದೆ. ಆ ಮೂಲಕ ಕೈಗಾರಿಕಾ ಪಟ್ಟಣ ಸುರತ್ಕಲ್‌ಗೆ ದೊಡ್ಡ ಹಿನ್ನಡೆಯಾಗಿದ್ದು, ಈ ವೈಫಲ್ಯಕ್ಕೆ ಶಾಸಕ ಭರತ್ ಶೆಟ್ಟಿ ಅವರೇ ನೇರ ಹೊಣೆ ಎಂದು ಆರೋಪಿಸಿದ ಅವರು, ಸುರತ್ಕಲ್‌ನಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಆಗಸ್ಟ್ ಕೊನೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸಭೆಯನ್ನುದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ ಹಾಗೂ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್ ಮಾತನಾಡಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಕೃಷ್ಣಾನಂದ ಡಿ., ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ವೈ. ರಾಘವೇಂದ್ರ ರಾವ್, ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಬಜ್ಪೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ., ಅಸುಂತಾ ಡಿ’ಸೋಜ, ಸಿಲ್ವಿಯಾ ಜೋಕಟ್ಟೆ ಉಪಸ್ಥಿತರಿದ್ದರು. ಕಾಟಿಪಳ್ಳ ಸಾಮಾಜಿಕ ಸಂಘಟನೆಗಳ ವೇದಿಕೆಯ ಮುಂದಾಳುಗಳಾದ ಸಮದ್ ಕಾಟಿಪಳ್ಳ, ಸಲೀ ಶ್ಯಾಡೊ, ನಿಯಾಜ್ ಬದ್ರಿಯಾ, ಫಾರೂಕ್ ಪುತ್ತ, ಅಲ್ತಾಫ್ ಕಾಟಿಪಳ್ಳ, ರಫಿ, ಹಂಝ ಕಾಟಿಪಳ್ಳ ಹಾಗೂ ಹೋರಾಟ ಸಮಿತಿಯ ಪ್ರಮುಖರಾದ ಅಜ್ಮಲ್ ಕಾನ, ಬಿ. ಕೆ. ಮಕ್ಸೂದ್, ಜಗದೀಶ ಕಾನ, ಹರೀಶ್ ಪೇಜಾವರ, ನವಾಜ್ ಕುಳಾಯಿ, ಇಂತಿಯಾಜ್ ಕುಳಾಯಿ, ರವಿಚಂದ್ರ ಕೊಂಚಾಡಿ, ಚಂದ್ರಕಾಂತ ದೇವಾಡಿಗ, ಹಸೈನಾರ್ ಜೋಕಟ್ಟೆ, ಪುಷ್ಪಾ ಜೋಕಟ್ಟೆ, ರಿಕ್ಷಾ ಚಾಲಕರ ಸಂಘದ ಲಕ್ಷ್ಮೀಶ ಕುಳಾಯಿ, ಕಬೀರ್ ಕೃಷ್ಣಾಪುರ, ಶಾಕಿರ್ ಮತ್ತಿತರರು ನೇತೃತ್ವ ವಹಿಸಿದ್ದರು.

ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸುರತ್ಕಲ್ ಘಟಕದ ಸಂಚಾಲಕ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ