ಇ-20 ಪೆಟ್ರೋಲ್ ನಿಂದ ವಾಹನಗಳಿಗೆ ಹಾನಿಯಾಗುತ್ತಿದೆಯೇ? ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು? - Mahanayaka

ಇ–20 ಪೆಟ್ರೋಲ್ ನಿಂದ ವಾಹನಗಳಿಗೆ ಹಾನಿಯಾಗುತ್ತಿದೆಯೇ? ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?

e20 fuel
08/07/2026

ಹೊಸದೆಹಲಿ: ಇಥನಾಲ್ ಮಿಶ್ರಿತ ಇಂಧನದ (ಇ–20 ಪೆಟ್ರೋಲ್) ಬಳಕೆಯಿಂದ ವಾಹನಗಳ ಇಂಜಿನ್‌ ಗಳಿಗೆ ಹಾನಿಯಾಗುತ್ತದೆ ಎಂಬ ಸುಳ್ಳು ಸುದ್ದಿಗಳು ಹಾಗೂ ಇ–25 ಇಂಧನ ಬಿಡುಗಡೆಯ ಗೊಂದಲಗಳ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ ನೀಡಿದ್ದಾರೆ. E20 ಇಂಧನದ ಬಗ್ಗೆ ಯಾವುದೇ ವಿವಾದಗಳಿಲ್ಲ, ಬದಲಿಗೆ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ ಐ ಜೊತೆ ಮಾತನಾಡಿದ ಸಚಿವರು, “ದೇಶದಲ್ಲಿ ಈಗಾಗಲೇ 20 ಕೋಟಿ ದ್ವಿಚಕ್ರ ವಾಹನಗಳು ಹಾಗೂ 20 ಲಕ್ಷ ನಾಲ್ಕು ಚಕ್ರದ ವಾಹನಗಳು ಯಾವುದೇ ತೊಂದರೆಯಿಲ್ಲದೆ ಇಥನಾಲ್ ಮಿಶ್ರಿತ ಇಂಧನವನ್ನು ಬಳಸುತ್ತಿವೆ. ವಾಹನ ತಯಾರಕರು ಮತ್ತು ಸರ್ವಿಸ್ ಮಾಡುವವರು ಇಂಧನದಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಹಠಾತ್ತನೆ ಈ ವಿವಾದ ಏಕೆ?” ಎಂದು ಪ್ರಶ್ನಿಸಿದರು.

ಭಾರತವು ಕಳೆದ ಮೂರೂವರೆ ವರ್ಷಗಳಿಂದ ಇ–15 ಮತ್ತು ಕಳೆದ ವರ್ಷದ ಏಪ್ರಿಲ್‌ ನಿಂದ ದೇಶಾದ್ಯಂತ ಇ–20 ಇಂಧನವನ್ನು ಬಳಸುತ್ತಿದೆ. ಸರ್ಕಾರವು ಇ–25 ಇಂಧನವನ್ನು ತರಾತುರಿಯಲ್ಲಿ ತರುತ್ತಿಲ್ಲ, ಪ್ರಸ್ತುತ ಇದರ ಪರೀಕ್ಷೆಗಳು ನಡೆಯುತ್ತಿದ್ದು, ವರದಿ ಬಂದ ಬಳಿಕವೇ ವಾಹನ ತಯಾರಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹೈಡ್ರೋಜನ್ ವಾಹನಗಳ ಪರ ನಿತಿನ್ ಗಡ್ಕರಿ ಬ್ಯಾಟಿಂಗ್:

ಇದೇ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪರಿಸರಸ್ನೇಹಿ ಹೈಡ್ರೋಜನ್ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನನ್ನ ಮನೆಯಲ್ಲಿ ಎಲೆಕ್ಟ್ರಿಕ್, ಫ್ಲೆಕ್ಸ್–ಫ್ಯುಯೆಲ್ ಹಾಗೂ ಹೈಡ್ರೋಜನ್ ಚಾಲಿತ ಮೂರೂ ಕಾರುಗಳಿವೆ. ನಾನು ಸದ್ಯ ಹೈಡ್ರೋಜನ್ ಕಾರಿನಲ್ಲೇ ಪ್ರಯಾಣಿಸುತ್ತಿದ್ದು, ಇದು ಮರ್ಸಿಡಿಸ್ ಕಾರಿಗಿಂತಲೂ ಉತ್ತಮ ಅನುಭವ ನೀಡುತ್ತದೆ” ಎಂದಿದ್ದಾರೆ.

ಭಾರತೀಯ ರಸ್ತೆಗಳಿಗೆ ಶೀಘ್ರದಲ್ಲೇ ಹೈಡ್ರೋಜನ್ ಚಾಲಿತ ಟ್ರಕ್ ಹಾಗೂ ಬಸ್‌ ಗಳು ಬರಲಿವೆ. ನಾಗ್ಪುರದಲ್ಲಿ ಹೈಡ್ರೋಜನ್ ಉತ್ಪಾದಿಸಿ ಬಸ್‌ಗಳಿಗೆ ಬಳಸುವ ಪ್ರಾಯೋಗಿಕ ಯೋಜನೆ (ಪೈಲಟ್ ಪ್ರಾಜೆಕ್ಟ್) ಚಾಲ್ತಿಯಲ್ಲಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಇಂಧನ ಆಮದು ಹಾಗೂ ಮಾಲಿನ್ಯ ತಗ್ಗಿಸಲು ಪರ್ಯಾಯ ಇಂಧನಗಳ ಬಳಕೆ ಅನಿವಾರ್ಯ ಎಂದು ಅವರು ಒತ್ತಿ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ