ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಮದುವೆ ನಿಶ್ಚಯವಾಗಿದ್ದ ಯುವತಿ ಸಾವು!
ಬೆಂಗಳೂರು: ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್ ಸರ್ಕಲ್ ಬಳಿ ನಡೆದಿದೆ.
ಪ್ರಶಾಂತ್ (25) ಮತ್ತು ಶಿಲ್ಪ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಒಂದೇ ಕಂಪೆನಿಯಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮೃತರಿಬ್ಬರೂ ಸ್ನೇಹಿತರಾಗಿದ್ದರು. ನಿನ್ನೆ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸವಿದ್ದರು. ಇವರ ಮದುವೆಗೆ ಮಾತುಕತೆ ನಡೆದಿತ್ತು. ಘಟನೆ ನಡೆದ ಬೆಳಿಗ್ಗೆಯಷ್ಟೇ ಮದುವೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅಷ್ಟರಲ್ಲೇ ಇಂತಹದ್ದೊಂದು ಘಟನೆ ನಡೆದಿದೆ.
ಶಿಲ್ಪಾ ತಂದೆ ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಶಿಲ್ಪಗೆ ಮದುವೆ ನಿಶ್ಚಯವಾಗಿತ್ತು. ಮಗಳಿಗೆ ಮದುವೆಗಾಗಿ ಚಿನ್ನಾಭರಣಗಳನ್ನೂ ತಂದೆ ಮಾಡಿಸಿಟ್ಟಿದ್ದರಂತೆ. ಆದರೆ ಇದೀಗ ಮಗಳೇ ಇಲ್ಲ ಎಂದು ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶಿಲ್ಪ ಮೃತದೇಹ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿದ್ದು, ಆಕೆಯನ್ನು ಕಾಣಲು ಪೋಷಕರು ಆಗಮಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: