ನನ್ನ ಅಂಗಾಂಗ ಮಾರಾಟ ಮಾಡಿ ಸಾಲ ತೀರಿಸಿ ಎಂದು ಪ್ರಧಾನಿಗೆ ಪತ್ರ ಬರೆದು ರೈತ ಆತ್ಮಹತ್ಯೆ
ಭೋಪಾಲ್: ಮಧ್ಯಪ್ರದೇಶ ಛತ್ತರ್ ಪುರ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕಂಪೆನಿಯ ಕಿರುಕುಳ ಸಹಿಸಲು ಸಾಧ್ಯವಾಗದ ಕಾರಣ ರೈತರೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ನನ್ನ ಅಂಗಾಂಗಗಳನ್ನು ಮಾರಾಟ ಮಾಡಿ ಸಾಲ ತೀರಿಸಿ ಎಂದು ಪ್ರಧಾನಿ ಮೋದಿಗೆ ವಿನಂತಿಸಿದ್ದಾರೆ.
ರೈತ ಮುನೇಂದ್ರ ರಜಪೂತ್(35) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೊರೋನ ವೇಳೆ ಬಾಕಿ ಉಳಿಸಲಾಗಿದ್ದ ವಿದ್ಯುತ್ ಬಿಲ್ 87,000 ರೂ. ವಸೂಲಿಗಾಗಿ ವಿದ್ಯುತ್ ಸರಬರಾಜು ಕಂಪೆನಿ(ಡಿಸ್ಕಾಂ) ರಜಪೂತ್‌ಗೆ ಸೇರಿರುವ ಹಿಟ್ಟಿನ ಗಿರಣಿ ಹಾಗೂ ಬೈಕ್ ಮುಟ್ಟುಗೋಲು ಹಾಕಿತ್ತು. ಇದರಿಂದ ಸ್ವಾಭಿಮಾನಿಯಾಗಿರುವ ಮುನೇಂದ್ರ ರಜಪೂತ್ ತೀವ್ರ ಮುಜುಗರ ಅನುಭವಿಸಿದ್ದರು.
ದೊಡ್ಡ ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಗರಣಗಳನ್ನು ನಡೆಸಿದ್ದರೂ ಸರಕಾರಿ ಉದ್ಯೋಗಿಗಳು ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ.ಅವರು ಸಾಲ ಪಡೆದರೆ ಹಣ ಮರು ಪಾವತಿಗೆ ಸಾಕಷ್ಟು ಸಮಯ ನೀಡಲಾಗುತ್ತದೆ ಅಥವಾ ಸಾಲ ಮನ್ನಾ ಮಾಡಲಾಗುತ್ತದೆ. ಆದರೆ, ಬಡವನೊಬ್ಬ ಸಣ್ಣ ಮೊತ್ತದ ಸಾಲ ಪಡೆದರೆ ಸಾಲ ಮರುಪಾವತಿಸಲು ಏಕೆ ಸಾಧ್ಯವಾಗಿಲ್ಲ ಎಂದು ಕೂಡ ಕೇಳುವುದಿಲ್ಲ. ಅದರ ಬದಲಿಗೆ ಎಲ್ಲರೆದುರು ಅವರಿಗೆ ಅವಮಾನ ಮಾಡಲಾಗುತ್ತದೆ ಎಂದು ಮುನೇಂದ್ರ ರಜಪೂತ್ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯುತ್ ಬಿಲ್ 87,000 ಬಾಕಿ ಉಳಿದಿತ್ತು. ಇದಕ್ಕಾಗಿ ವಿದ್ಯುತ್ ಕಂಪೆನಿ ರೈತ ಮುನೇಂದ್ರ ಅವರಿಗೆ ತೀವ್ರ ಅವಮಾನ ಮಾಡಿತ್ತು. ಮೃತ ಮನೇಂದ್ರ ಅವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.