'ದಿಮಾಗಿ ನಕ್ಸಲರನ್ನು' ಸಮಾಜದಿಂದ ಪ್ರತ್ಯೇಕಿಸಬೇಕು: ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಕರೆ - Mahanayaka
1:13 PM Thursday 10 - September 2026

‘ದಿಮಾಗಿ ನಕ್ಸಲರನ್ನು’ ಸಮಾಜದಿಂದ ಪ್ರತ್ಯೇಕಿಸಬೇಕು: ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಕರೆ

pm modi
15/08/2026

ಹೊಸದೆಹಲಿ:  ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸಾಚಾರವು ತನ್ನ ಕೊನೆಯುಸಿರೆಳೆಯುತ್ತಿದೆ. ಆದರೆ, ಸಮಾಜಕ್ಕೆ ಮುಳ್ಳಾಗಿರುವ ‘ದಿಮಾಗಿ ನಕ್ಸಲರನ್ನು’ (ಬೌದ್ಧಿಕ ನಕ್ಸಲರು/ವೈಚಾರಿಕ ನಕ್ಸಲರು) ಗುರ್ತಿಸಿ, ಅವರನ್ನು ಪ್ರತ್ಯೇಕಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೆಹಲಿಯ ಕೆಂಪುಕೋಟೆಯ ಆವರಣದಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಂದೂಕು ಹಿಡಿದು ಹೋರಾಡುವ ನಕ್ಸಲರು ಕಡಿಮೆಯಾಗಿದ್ದರೂ, ಅವರ ಸಿದ್ಧಾಂತವನ್ನು ಪಸರಿಸುವ ಬೌದ್ಧಿಕ ನಕ್ಸಲರ ಬಗ್ಗೆ ದೇಶವು ಸದಾ ಜಾಗರೂಕತೆಯಿಂದ ಇರಬೇಕು ಎಂದು ಪ್ರತಿಪಾದಿಸಿದರು.

“ಬಂದೂಕು ಹಿಡಿದ ನಕ್ಸಲರು ಅಂತ್ಯವಾಗುತ್ತಿದ್ದಾರೆ, ಆದರೆ ‘ದಿಮಾಗಿ ನಕ್ಸಲರು’ ಇನ್ನೂ ಸಮಾಜದಲ್ಲಿ ಅಡಗಿಕೊಂಡಿದ್ದಾರೆ. ನಾವು ಅವರ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ,” ಎಂದು ಪ್ರಧಾನಿ ಹೇಳಿದರು.

ನಕ್ಸಲಿಸಂ ಮತ್ತು ಮಾವೋವಾದ ದೇಶದ ಲಕ್ಷಾಂತರ ಯುವಕರ ಭವಿಷ್ಯವನ್ನು ಹಾಳುಮಾಡಿದೆ. ಕಳೆದ ನಾಲ್ಕು ದಶಕಗಳಲ್ಲಿ ಬಂದೂಕಿನ ಸಂಸ್ಕೃತಿಯು ಸಂವಿಧಾನವನ್ನು ಧ್ವಂಸಗೊಳಿಸಿತ್ತು ಮತ್ತು ಈ ಹಿಂಸಾಚಾರದಲ್ಲಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರಾಣ ಕಳೆದುಕೊಂಡಿದ್ದಾರೆ.

2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ದೃಢ ಸಂಕಲ್ಪ ತೊಟ್ಟಿರುವುದಾಗಿ ಪ್ರಧಾನಿ ಸ್ಮರಿಸಿದರು.

ಹಿಂದೆ ನಕ್ಸಲರ ಗುಂಡಿನ ಸದ್ದು ಕೇಳಿಸುತ್ತಿದ್ದ ಮತ್ತು ರಕ್ತಸಿಕ್ತವಾಗಿದ್ದ ಪ್ರದೇಶಗಳಲ್ಲಿ ಇಂದು ಅಭಿವೃದ್ಧಿ, ಭರವಸೆ ಮತ್ತು ತ್ರಿವರ್ಣ ಧ್ವಜ ಹಾರಾಡುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳು ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗುವತ್ತ ಸಾಗುತ್ತಿವೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದ್ದು, ದೇಶದ ಪ್ರಗತಿಗೆ ತೊಡಕಾಗಿರುವ ದಶಕಗಳ ಹಳೆಯ ಸವಾಲುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಬಲವಾಗಿ ಪ್ರತಿಪಾದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti