ಸಂವಿಧಾನದ ಆಚರಣೆಯೂ, ಸಾಂವಿಧಾನಿಕ ನಡೆಯೂ - Mahanayaka

ಸಂವಿಧಾನದ ಆಚರಣೆಯೂ, ಸಾಂವಿಧಾನಿಕ ನಡೆಯೂ

indian constitution
26/11/2022

  • ಭವಿಷ್ಯದ ದಿಕ್ಸೂಚಿಯಾಗಬೇಕಿರುವ ಸಂವಿಧಾನವನ್ನು ಗ್ರಾಂಥಿಕವಾಗಿ ಮಾತ್ರವೇ ಅನುಸರಿಸುತ್ತಿದ್ದೇವೆ

  • ನಾ ದಿವಾಕರ

ಸ್ವತಂತ್ರ ಭಾರತ ಆಚರಿಸುತ್ತಿರುವ ರಾಷ್ಟ್ರೀಯ ದಿನಾಚರಣೆಗಳಲ್ಲಿ ನವಂಬರ್‌ 26 ಸಹ ಪ್ರಾಧಾನ್ಯತೆ ಪಡೆದಿರುವುದು, ಭಾರತದ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿರುವ ವಿಶ್ವಾಸ, ನಂಬಿಕೆ ಮತ್ತು ಅಪಾರ ಗೌರವದ ಸಂಕೇತವಾಗಿಯೇ ಕಾಣುತ್ತದೆ. ಸಂವಿಧಾನ ಪೀಠಿಕೆಯನ್ನು ಪ್ರತಿಜ್ಞಾವಿಧಿಯಂತೆ ಸ್ವೀಕರಿಸುವ ಪರಿಪಾಠ ಸಾರ್ವಜನಿಕ ವಲಯದಲ್ಲಿ ವ್ಯವಸ್ಥಿತವಾಗಿ ಬೆಳೆದುಬಂದಿದ್ದು, ಸಂವಿಧಾನದ ಮೂಲ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರೂ ಸಹ ಇಂದು ಅನಿವಾರ್ಯತೆಯಿಂದಲೋ, ಅವಶ್ಯಕತೆಗನುಗುಣವಾಗಿಯೋ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಮತಾಚರಣೆಯ ರೀತಿ ಪ್ರತಿಯೊಂದು ಸಭೆ ಸಮಾರಂಭಗಳಲ್ಲೂ ನಡೆಯುತ್ತಿರುವ ಈ ಪ್ರಕ್ರಿಯೆ ಬದಲಾಗುತ್ತಿರುವ ಭಾರತದಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳು ನಾಗರಿಕರ ನಡುವೆ ಬೇರೂರಬೇಕಾದ ಅವಶ್ಯಕತೆಯನ್ನೂ ಒತ್ತಿ ಹೇಳುತ್ತದೆ. ತಮ್ಮ ಕಣ್ಣೆದುರಿನಲ್ಲೇ ತಾವು ಗೌರವಿಸುವ ಸಂವಿಧಾನದ ಮೂಲ ಆಶಯಗಳು ಮೂಲೆಗುಂಪಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿರುವ ಸಾಮಾನ್ಯ ಜನರು, ವಿಭಿನ್ನ ನೆಲೆಗಳಲ್ಲಿ, ಏರು ದನಿಗಳ ಮೂಲಕ, ಸಂಘಟಿತರಾಗಿ ಈ ಆಶಯಗಳನ್ನು ಸಂರಕ್ಷಿಸಲು ಮುಂದಾಗುತ್ತಿರುವುದು ಸ್ವಾಗತಾರ್ಹವೇ ಆಗಿದೆ.

ಸಂವಿಧಾನ ರಕ್ಷಣೆಯ ಮಾತುಗಳು ಮುನ್ನೆಲೆಗೆ ಬಂದ ಕೂಡಲೇ ನಮ್ಮ ಗಮನ ಡಾ ಬಿ ಆರ್‌ ಅಂಬೇಡ್ಕರ್‌ ಅವರ ದಾರ್ಶನಿಕ ನುಡಿಗಳತ್ತ ಸಹಜವಾಗಿಯೇ ಹೊರಳುತ್ತದೆ. ಭಾರತದ ಸಂವಿಧಾನ ಕೇವಲ ಬಯಕೆ, ಆಕಾಂಕ್ಷೆ ಮತ್ತು ಭರವಸೆಗಳ ಅಕ್ಷರ ಗುಚ್ಚ ಅಲ್ಲ ಎನ್ನುವುದನ್ನು ಅಂಬೇಡ್ಕರ್‌ ಅವರ ಮಾತುಗಳಲ್ಲೇ ಗ್ರಹಿಸಬಹುದಾಗಿದೆ. 200 ವರ್ಷಗಳ ವಸಾಹತು ದಾಸ್ಯದ ಸಂಕೋಲೆಗಳಿಂದ ವಿಮೋಚನೆ ಪಡೆದ ಭಾರತವನ್ನು ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿಯೂ ಸಹ ಹಲವು ಸಂಕೋಲೆಗಳು ಬಂಧಿಸಿದ್ದುದನ್ನು ಮನಗಂಡೇ ಡಾ ಬಿ ಆರ್‌ ಅಂಬೇಡ್ಕರ್‌ ಸಂವಿಧಾನದಲ್ಲಿ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಶತಮಾನಗಳಿಂದ ಕಾಪಾಡಿಕೊಂಡು ಬಂದಿದ್ದ ಬಹುತ್ವದ ಸಾಂಸ್ಕೃತಿಕ ನೆಲೆಗಳೇ ಮೂಲಾಧಾರ ಎಂಬ ವಾಸ್ತವವನ್ನು ಅರಿತೇ ಸಂವಿಧಾನದಲ್ಲಿ ಸಮ ಸಮಾಜದ ಆಶಯಗಳೊಡನೆ, ವ್ಯಕ್ತಿ ಸ್ವಾತಂತ್ರ್ಯಕ್ಕೂ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು.

ಸಂವಿಧಾನ ಪೀಠಿಕೆಯನ್ನು ವಿದ್ಯುಕ್ತವಾಗಿ ಪಠಣ ಮಾಡುವ ಒಂದು ಬೌದ್ಧಿಕ ಪ್ರಕ್ರಿಯೆ ವ್ಯಾಪಕವಾಗಿ ಚಾಲನೆ ಪಡೆದಿರುವ ಸಂದರ್ಭದಲ್ಲೇ ಸಮಕಾಲೀನ ಸನ್ನಿವೇಶದತ್ತ ಒಮ್ಮೆ ಗಮನ ಹರಿಸಿದಾಗ ನಮ್ಮೊಳಗಿನ ಆತ್ಮವಂಚಕ ಪ್ರಜ್ಞೆ ಧಿಗ್ಗನೆದ್ದು ಕುಳಿತುಕೊಳ್ಳುತ್ತದೆ. ಏಕೆಂದರೆ ಭಾರತದ ಸಂವಿಧಾನ ಬಯಸುವಂತಹ ಒಂದು ಸಮ ಸಮಾಜವನ್ನು, ಬಹುಸಾಂಸ್ಕೃತಿಕ ನೆಲೆಗಳನ್ನು, ಸಾಮಾಜಿಕಾರ್ಥಿಕ ಸಮಾನತೆಯ ಜನಜೀವನವನ್ನು ಕಾಪಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿದೆಯೇ ಎಂಬ ಆತಂಕ, ಅನುಮಾನಗಳು ಕಾಡಲಾರಂಭಿಸುತ್ತವೆ. ಒಂದು ಸ್ವಸ್ಥ ಸಮಾಜವನ್ನು ರೂಪಿಸಲು ಮನುಷ್ಯ ಮನುಷ್ಯರ ನಡುವೆ ಅಗತ್ಯವಾಗಿ ಇರಲೇಬೇಕಾದ ನಂಬಿಕೆ ಮತ್ತು ವಿಶ್ವಾಸಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಹೋಗುತ್ತಿರುವುದನ್ನು ಸುತ್ತಲಿನ ಬೆಳವಣಿಗೆಗಳು ಸೂಚಿಸುತ್ತಲೇ ಇವೆ. ಮತೀಯವಾದ ಮತ್ತು ಕೋಮುವಾದದ ಬೇರುಗಳು ಆಳಕ್ಕಿಳಿದಿರುವುದೇ ಅಲ್ಲದೆ, ಶತಮಾನಗಳಿಂದ ಬೇರೂರಿರಬಹುದಾದ ಸಮನ್ವಯದ ಮೂಲ ಬೇರುಗಳನ್ನೂ ಮಲಿನಗೊಳಿಸುತ್ತಿರುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಸುತ್ತಲಿನ ಅಸ್ಮಿತೆಯ ಮೇಲು ಹೊದಿಕೆಗಳನ್ನು ಕಿತ್ತೊಗೆದು, ಬಹುತ್ವದ ನೆಲೆಗಳನ್ನು ಪೋಷಿಸುವಂತಹ ಮಾನವೀಯ ಮೌಲ್ಯಗಳ ಕವಚವನ್ನು ಧರಿಸಬೇಕಾದ ಸಂದರ್ಭದಲ್ಲಿ, ಮತಾಂಧತೆ, ಜಾತೀಯತೆ ಮತ್ತು ಮತೀಯ ಪ್ರಜ್ಞೆಗಳ ಬೇರುಗಳು ತಮ್ಮದೇ ಆದ ವಿಷವರ್ತುಲಗಳನ್ನು ಎಲ್ಲೆಡೆ ನಿರ್ಮಿಸುತ್ತಿವೆ.

ಇದನ್ನೂ ಕಂಡೂ ಕಾಣದಂತಿರುವ ಅಧಿಕಾರಸ್ತ ಹಿತವಲಯ ಒಂದೆಡೆ ಇದ್ದರೆ ಮತ್ತೊಂದೆಡೆ ಈ ಬೇರುಗಳನ್ನು ನೀರೆರೆದು ಪೋಷಿಸುವ ಸ್ವಾರ್ಥ ರಾಜಕಾರಣದ, ಸಾಂಸ್ಕೃತಿಕ ಶ್ರೇಷ್ಠತೆಯ ಸುಖವಲಯ ಮತ್ತೊಂದೆಡೆ ಸಕ್ರಿಯವಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂತಃಸತ್ವ ಇರುವುದು ಈ ದೇಶದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಮತ್ತು ವೈವಿಧ್ಯಮಯ ಸಾಂಸ್ಕೃತಿಕ-ಭಾಷಿಕ-ಧಾರ್ಮಿಕ ಮತ್ತು ಪ್ರಾದೇಶಿಕ ನೆಲೆಗಳಲ್ಲಿ. ಭೌಗೋಳಿಕವಾಗಿ ನಾವು ಆರಾಧಿಸುವ, ವೈಭವೀಕರಿಸುವ ಭಾರತದ ಆಂತರ್ಯದಲ್ಲಿ ಭೌತಿಕವಾಗಿ ಹಾಗೂ ಬೌದ್ಧಿಕವಾಗಿಯೂ ಸಹ ಹಲವಾರು ಚಿಂತನಾ ವಾಹಿನಿಗಳಿವೆ, ಆಲೋಚನಾ ಕ್ರಮಗಳಿವೆ, ಜೀವನಶೈಲಿಯ ಮಾರ್ಗಗಳಿವೆ, ಸೈದ್ಧಾಂತಿಕ ಧಾರೆಗಳಿವೆ. ಈ ವೈವಿಧ್ಯಮಯ ತೊರೆಗಳೇ ಗಂಗೆಯಿಂದ ಕಾವೇರಿಯವರೆಗೆ ಭಾರತವನ್ನು ಭೌಗೋಳಿಕವಾಗಿ ಬಂಧಿಸಿದೆ. ಈ ವಿಭಿನ್ನ ಧಾರೆಗಳನ್ನು ಛಿದ್ರಗೊಳಿಸುವ ಪ್ರಯತ್ನಗಳು ಸ್ವಾತಂತ್ರ್ಯ ಪೂರ್ವದಿಂದಲೇ ನಡೆಯುತ್ತಿದ್ದು ಇಂದಿಗೂ ಸಹ ಜನಸಾಮಾನ್ಯರ ಜೀವನದಲ್ಲಿ ಕ್ಷೋಭೆಯನ್ನು ಸೃಷ್ಟಿಸುತ್ತಲೇ ಬರಲಾಗಿದೆ.

ಭಾರತದ ಸಂವಿಧಾನ ಇಂತಹ ಪ್ರಯತ್ನಗಳನ್ನು ತಡೆಗಟ್ಟಬಹುದಾದ ಒಂದು ಪ್ರಬಲ ಜನಾಸ್ತ್ರವಾಗಿದೆ. ಆಳುವ ವರ್ಗಗಳಿಗೆ ಮತ್ತು ಅಧಿಕಾರ ರಾಜಕಾರಣದ ವಾರಸುದಾರರಿಗೆ, ಸಂವಿಧಾನ ಎನ್ನುವುದು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಲು ಅಗತ್ಯ ಪರಿಕರಗಳನ್ನು ಒದಗಿಸುವ ಒಂದು ಗ್ರಂಥವಾಗಿ ಕಾಣುವುದು ಸಹಜ. ಏಕೆಂದರೆ ಅಲ್ಲಿ ಪ್ರಜೆಗಳ ಹಕ್ಕು, ಕರ್ತವ್ಯ ಮತ್ತು ಆದ್ಯತೆಗಳನ್ನು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಿರ್ವಹಿಸುವ ಮತ್ತು ನಿಯಂತ್ರಿಸುವ ಮಾರ್ಗದರ್ಶಿ ಸೂತ್ರಗಳಿವೆ. ಹಾಗಾಗಿ ನವಂಬರ್‌ 26ರ ಸಂವಿಧಾನ ದಿನ ಎಂದರೆ, ಆಳುವ ವರ್ಗಗಳಿಗೆ ಮತ್ತು ಸರ್ಕಾರಗಳಿಗೆ ಆಡಳಿತ ವ್ಯವಸ್ಥೆಯನ್ನು ಕಾಪಾಡುವ, ನಾಗರಿಕರ ನಡುವೆ ಏಕತೆಯನ್ನು ಸಾಧಿಸುವ, ದೇಶದ ಅಖಂಡತೆಯನ್ನು ಸಂರಕ್ಷಿಸುವ ಹಾಗೂ ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ಗಮನಿಸುವ ಒಂದು ಮಹತ್ವದ ದಿನವಾಗಿ ಕಾಣುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೂಲಕ ಸಾಂವಿಧಾನಿಕ ಆಶಯಗಳಾದ ಸಮ ಸಮಾಜವನ್ನು ರೂಪಿಸಲು ಬೇಕಾಗುವ ಹಾದಿಗಳನ್ನು ನಿರ್ಮಿಸುವ ಒಂದು ದಿಕ್ಸೂಚಿ ಗ್ರಂಥವಾಗಿ ಸಂವಿಧಾನ ಕಾಣುತ್ತದೆ. ಸರ್ಕಾರಗಳು ರೂಪಿಸುವ ಕಾಯ್ದೆ ಕಾನೂನುಗಳು ಮತ್ತು ಶಾಸನಗಳು ಈ ಚೌಕಟ್ಟಿನಲ್ಲೇ ಜಾರಿಯಾಗುವುದರಿಂದ, ಸಮಸ್ತ ಪ್ರಜೆಗಳೂ ಸಂವಿಧಾನವನ್ನು ಗೌರವದಿಂದ ಕಾಣಬೇಕೆನ್ನುವ ಆಶಯವೂ ಸಹಜವಾಗಿಯೇ ಇರುತ್ತದೆ.

ಆದರೆ ನಾಗರಿಕ ನೆಲೆಯಲ್ಲಿ ನಿಂತು ಬಾಹ್ಯ ಸಮಾಜದತ್ತ ಒಮ್ಮೆ ಗಮನ ಹರಿಸಿದರೆ ನಾವು ಡಾ ಬಿ ಆರ್‌ ಅಂಬೇಡ್ಕರ್‌ ಬಯಸಿದಂತಹ ಒಂದು ಸಾಮಾಜಿಕ ಸನ್ನಿವೇಶವನ್ನು ಸೃಷ್ಟಿಸಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡದಿರುವುದಿಲ್ಲ. ಜನಸಾಮಾನ್ಯರ ನಿತ್ಯ ಬದುಕನ್ನು ನಿಯಂತ್ರಿಸುವ ಶಾಸನಗಳು, ಕಾನೂನು ಕಟ್ಟಳೆಗಳು, ಆಂತರಿಕವಾಗಿ ಭಾರತದ ನಾಗರಿಕರಲ್ಲಿ ಸಾಂವಿಧಾನಿಕ ಪ್ರಜ್ಞೆಯನ್ನು ಮೂಡಿಸಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಏಕೆಂದರೆ ಶಾಸನಬದ್ಧವಾಗಿ ನಿಷೇಧಿತವಾದ ಅಸ್ಪೃಶ್ಯತೆಯಂತಹ ಅನೇಕ ಪ್ರಾಚೀನ ಆಚರಣೆಗಳು ನಮ್ಮ ನಡುವೆ ಜೀವಂತವಾಗಿವೆ. ಮಹಿಳೆಯರ, ದುರ್ಬಲ ವರ್ಗಗಳ ರಕ್ಷಣೆಗಾಗಿ ಹಲವಾರು ಕಠಿಣ ಕಾನೂನುಗಳು ಇದ್ದರೂ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಧಾರ್ಮಿಕ ಆಚರಣೆ ಮತ್ತು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಸ್ವಾತಂತ್ರ್ಯವು ಶಾಸನಬದ್ಧವಾಗಿ ರಕ್ಷಿತವಾಗಿದ್ದರೂ, ಅಂತರ್ಜಾತಿ-ಅಂತರ್‌ ಧರ್ಮೀಯ ವಿವಾಹಗಳು ದುರ್ಬಲರ, ಅಮಾಯಕರ ಹತ್ಯೆಗಳಲ್ಲಿ ಕೊನೆಗೊಳ್ಳುತ್ತಿವೆ. ಉಡುಪು ಮತ್ತು ಆಹಾರ ಸೇವನೆಯ ಮೂಲಭೂತ ಹಕ್ಕುಗಳೂ ಸಹ ಸಾಂಪ್ರದಾಯಿಕ-ಸಾಂಸ್ಕೃತಿಕ ಶಕ್ತಿಗಳ ದಾಳಿಗೊಳಗಾಗಿ, ಜನಸಾಮಾನ್ಯರ ಸ್ವಾಯತ್ತತೆ ಮತ್ತು ವ್ಯಕ್ತಿ ಸ್ವಾತಂತ್ರ್ಯವು ಸತತವಾಗಿ ದಾಳಿಗೊಳಗಾಗುತ್ತಿದೆ.

ಇತ್ತೀಚೆಗೆ ಮೈಸೂರು ಸಮೀಪ ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರಾ ಗ್ರಾಮದಲ್ಲಿ ಸಾರ್ವಜನಿಕ ತೊಂಬೆಯೊಂದರಲ್ಲಿ ದಲಿತ ಮಹಿಳೆ ನೀರು ಕುಡಿದಿದ್ದನ್ನು ಮಾಲಿನ್ಯ ಎಂದು ಪರಿಗಣಿಸಿ, ನೀರಿನ ಟ್ಯಾಂಕನ್ನು ಗೋಮೂತ್ರದಿಂದ ಶುದ್ಧೀಕರಿಸಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿ ಅಸ್ಪೃಶ್ಯರಿಗೆ ಕ್ಷೌರ ಮಾಡಲು ನಿರಾಕರಿಸುವ ಪ್ರಕರಣವೂ ನಡೆದಿದೆ. ಮಾಲೂರು ಬಳಿಯ ಗ್ರಾಮವೊಂದರಲ್ಲಿ ನಡೆದ ಗುಜ್ಜುಕೋಲು ಘಟನೆ ಇನ್ನೂ ಹಸಿರಾಗಿಯೇ ಇದೆ. ಕೊಪ್ಪಳದಲ್ಲಿ ಅಸ್ಪೃಶ್ಯ ಸಮುದಾಯದ ಹಸುಳೆಯೊಂದು ದೇವಾಲಯ ಪ್ರವೇಶಿಸಿದ್ದಕ್ಕಾಗಿ ಬಹಿಷ್ಕಾರ ದಂಡ ವಿಧಿಸಿದ ಘಟನೆಯ ನಂತರ ಇಂತಹ ಹಲವಾರು ಘಟನೆಗಳು ಕರ್ನಾಟಕದಲ್ಲೇ ನಡೆಯುತ್ತಿವೆ. ಈ ಅಮಾನುಷ ಘಟನೆಗಳ ವಿರುದ್ಧ ದಲಿತ ಸಂಘಟನೆಗಳು, ಪ್ರಜ್ಞಾವಂತ ನಾಗರಿಕರು, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ ಸಹಜವಾಗಿಯೇ ಕಂಡುಬಂದಿದೆ. ಆದರೆ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಇವೆಲ್ಲವೂ ಕೇವಲ ಕಾನೂನು ಶಿಸ್ತಿನ ವ್ಯಾಪ್ತಿಗೊಳಪಡಬೇಕಾದ ಘಟನೆಗಳಷ್ಟೇ ಆಗಿವೆ. ಇಂತಹ ಸಂವಿಧಾನ ವಿರೋಧಿ, ಮಾನವ ವಿರೋಧಿ ಘಟನೆಗಳು ಏಕೆ ನಡೆಯುತ್ತಿವೆ, ಇದನ್ನು ತಡೆಗಟ್ಟುವುದು ಹೇಗೆ, ಸಮಾಜದಲ್ಲಿ ಜಾತಿ ಶ್ರೇಷ್ಠತೆಯ ಬೇರುಗಳನ್ನು ಕಿತ್ತೆಸೆದು ಸಮನ್ವಯ ಸಾಧಿಸುವ ಬಗೆ ಹೇಗೆ ಎಂಬ ಆಲೋಚನೆಯೂ ಸಹ, ನವಂಬರ್‌ 26ರಂದು ಪ್ರತಿಜ್ಞಾವಿಧಿ ಸ್ವೀಕರಿಸುವ ಜನಪ್ರತಿನಿಧಿಗಳಿಗೆ ಬರುವುದಿಲ್ಲ.
ಹಾಗೊಮ್ಮೆ ಆಲೋಚನೆ ಮೂಡಿದ್ದಲ್ಲಿ ಶಾಸಕಾಂಗವನ್ನು ಪ್ರತಿನಿಧಿಸುವ ಪ್ರತಿಯೊಬ್ಬರೂ ಈ ಘಟನೆಗಳಿಂದ ಜಾಗೃತರಾಗಿ, ಸರ್ಕಾರದ ವತಿಯಿಂದಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ನಿರಂತರವಾಗಿ ನಡೆಯುತ್ತಿರುವ ಅಸ್ಪೃಶ್ಯತಾಚರಣೆಯ ಘಟನೆಗಳು ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಸಚಿವಾಲಯಗಳನ್ನು ಕ್ರಿಯಾಶೀಲವನ್ನಾಗಿ ಮಾಡಬೇಕಿತ್ತು. ಒಂದು ಭಯೋತ್ಪಾದಕ ಕೃತ್ಯ ದೇಶದ ಸಾಮಾಜಿಕ ಚೌಕಟ್ಟನ್ನು ಭಂಜಿಸುವಂತೆಯೇ, ಜಾತಿ ಶ್ರೇಷ್ಠತೆಯನ್ನು ಮೆರೆಸುವ ಅಸ್ಪೃಶ್ಯತೆಯಂತಹ ಅಮಾನುಷ ಘಟನೆಗಳೂ ನಮ್ಮ ಸಮಾಜದ ಆಂತರಿಕ ನೆಲೆಗಳನ್ನು ಧ್ವಂಸ ಮಾಡುತ್ತವೆ ಎಂಬ ಪರಿವೆ ನಮ್ಮಲ್ಲಿ ಮೂಡಬೇಕಿತ್ತು. ಆದರೆ ಸಾಮಾನ್ಯವಾಗಿ ನಾವು ಕಾಣುತ್ತಿರುವಂತೆ ಮಹಿಳಾ ದೌರ್ಜನ್ಯಗಳು, ಅತ್ಯಾಚಾರ ಪ್ರಕರಣಗಳು, ಅಸ್ಪೃಶ್ಯತಾಚರಣೆಯ ಘಟನೆಗಳು ಸರ್ಕಾರದ ದೃಷ್ಟಿಯಲ್ಲಿ ಕೇವಲ ಕಾನೂನು ಭಂಜಕವಾಗಿ ಕಾಣುತ್ತಿವೆಯೇ ಹೊರತು, ಈ ಅಮಾನುಷತೆಯೇ ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಭಾವಿಸಲಾಗುತ್ತಿಲ್ಲ.

ವ್ಯಕ್ತಿ ಸ್ವಾತಂತ್ರ್ಯದ ದಮನ, ಧಾರ್ಮಿಕ ಸ್ವಾತಂತ್ರ್ಯದ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ, ಜನತೆಯ ಮೂಲಭೂತ ಮಾನವ ಹಕ್ಕುಗಳ ಮೇಲೆ ನಡೆಯುತ್ತಿರುವ ಪ್ರಹಾರ, ಜನಸಾಮಾನ್ಯರ ನಿತ್ಯ ಜೀವನದಲ್ಲಿ ಸರ್ಕಾರೇತರ ಸಾಂಸ್ಕೃತಿಕ ಸಂಘಟನೆಗಳು ಧರ್ಮ ಮತ್ತು ಸಂಸ್ಕೃತಿ ರಕ್ಷಣೆಯ ನೆಪದಲ್ಲಿ ನಡೆಸುತ್ತಿರುವ ದಾಳಿಗಳು, ಮಹಿಳೆಯರ ಘನತೆ ಗೌರವಗಳಿಗೆ ಧಕ್ಕೆ ಉಂಟುಮಾಡುವಂತಹ ಗೌರವ/ಹತ್ಯೆ ಪ್ರಕರಣಗಳು, ಸಂಸ್ಕೃತಿ ಸಂಪ್ರದಾಯದ ಹೆಸರಿನಲ್ಲಿ ಸತತ ದಾಳಿಗೊಳಗಾಗುತ್ತಿರುವ ಸಾಮಾನ್ಯ ಜನರ ಆಹಾರದ ಹಕ್ಕು, ಶಿಕ್ಷಣ/ಪೌಷ್ಟಿಕ ಆಹಾರ/ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿರುವ ಕೋಟ್ಯಂತರ ಬಡ ಜನತೆಯ ಬವಣೆ ಈ ಎಲ್ಲ ಸಮಸ್ಯೆಗಳಿಗೆ ಸಂವಿಧಾನವೇ ಪರಿಹಾರೋಪಾಯದ ಮಾರ್ಗಗಳನ್ನು ಒದಗಿಸುತ್ತದೆ. ಆಡಳಿತ ವ್ಯವಸ್ಥೆ ಮತ್ತು ಸರ್ಕಾರಗಳು ಅನುಸರಿಸುವ ಕಾನೂನುಗಳು ಸಂವಿಧಾನಬದ್ಧವಾಗಿದ್ದಲ್ಲಿ ಇಂತಹ ಘಟನೆಗಳನ್ನು, ವಿದ್ಯಮಾನಗಳನ್ನು ನಿಯಂತ್ರಿಸುವುದು, ಪರಿಹರಿಸುವುದು ಕಷ್ಟವೇನಲ್ಲ.

ನವಂಬರ್‌ 26ರಂದು ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸುವ ಪ್ರತಿಯೊಬ್ಬ ರಾಜಕೀಯ ನಾಯಕರಿಗೂ, ಜನಪ್ರತಿನಿಧಿಗೂ ಈ ಸಂವಿಧಾನ ವಿರೋಧಿ ಬೆಳವಣಿಗೆಗಳ ಪರಿವೆ ಇರಬೇಕಾಗುತ್ತದೆ. ಹಾಗೆಯೇ ಇದೇ ದಿನದಂದು ಯಾಂತ್ರಿಕವಾಗಿ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಅಧಿಕಾರಶಾಹಿಯ ಪ್ರತಿನಿಧಿಗಳಿಗೂ ತಮ್ಮ ಸುತ್ತಲೂ ಹಬ್ಬುತ್ತಲೇ ಇರುವ ಭ್ರಷ್ಟಾಚಾರದ ಆಲದ ಬೇರುಗಳು ಗೋಚರಿಸಬೇಕಲ್ಲವೇ ? ತಾವು ಸಿಲುಕಿರುವ, ಭಾಗಿಯಾಗಿರುವ, ಸಮ್ಮತಿಸಿರುವ ಅಥವಾ ಮೌನವಾಗಿ ಗಮನಿಸುತ್ತಿರುವ ಭ್ರಷ್ಟಾಚಾರದ ಬಾಹುಗಳು ತಮ್ಮ ಬದುಕನ್ನು ಹಸನುಗೊಳಿಸಿದರೂ, ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಾ ತಮ್ಮ ಬೆವರು ಸುರಿಸಿ ದೇಶವನ್ನು ಕಟ್ಟುತ್ತಿರುವ ಕೋಟ್ಯಂತರ ದುಡಿಯುವ ಜನತೆಯ ಬದುಕಿಗೆ ಮಾರಕವಾಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆ ಅಧಿಕಾರಶಾಹಿಯಲ್ಲಿ ಇರಬೇಕಲ್ಲವೇ ? ಹಾಗಿಲ್ಲದಿದ್ದರೆ ಸಮಾನತೆಯನ್ನೇ ಉಸಿರಾಡುವ ಸಂವಿಧಾನದ ಪೀಠಿಕೆಯನ್ನು ಪಠಣ ಮಾಡುವುದು ಯಾಂತ್ರಿಕ ಎನಿಸುವುದಿಲ್ಲವೇ ? ಭ್ರಷ್ಟಾಚಾರದ ಬೇರುಗಳನ್ನು ಗುರುತಿಸಿ ಕಿತ್ತೊಗೆಯದೆ ಈ ವಿಷವೃಕ್ಷಗಳಿಗೆ ನೀರೆರೆದ ಹಿಂದಿನ ಸರ್ಕಾರಗಳನ್ನು ದೂಷಿಸುತ್ತಲೇ, ಭ್ರಷ್ಟರ ಅಕ್ರಮ ಸಾಮ್ರಾಜ್ಯವನ್ನು ಅಂಕೆಯಿಲ್ಲದೆ ಬೆಳೆಯಲು ಅವಕಾಶ ನೀಡುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಪ್ರಜ್ಞೆ ಜಾಗೃತವಾಗುವುದೇ ಆದರೆ ಭಾರತ ಭ್ರಷ್ಟಮುಕ್ತವಾಗುವುದರಲ್ಲಿ ಸಂಶಯವೇ ಇಲ್ಲ.

ಏಕೆಂದರೆ ಸಾಮಾಜಿಕ-ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಾನತೆಯನ್ನು ಉಸಿರಾಡುವ ಭಾರತದ ಸಂವಿಧಾನದ ಮೂಲ ಧಾತು ಇರುವುದೇ ಈ ಪ್ರಾಮಾಣಿಕತೆಯಲ್ಲಿ. ಸಾಂವಿಧಾನಿಕ ನೈತಿಕತೆಯಲ್ಲಿ. ಈ ನೈತಿಕತೆಯನ್ನು ಕಳೆದುಕೊಂಡ ಆಡಳಿತ ವ್ಯವಸ್ಥೆಯಾಗಲೀ, ಅಧಿಕಾರಶಾಹಿಯಾಗಲೀ, ರಾಜಕೀಯ ಪಕ್ಷಗಳಾಗಲೀ ಭಾರತದ ಸಂವಿಧಾನವನ್ನು ಎತ್ತಿಹಿಡಿಯಲಾಗುವುದಿಲ್ಲ. “ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಒಂದು ರಾಜಕೀಯ ಪರಂಪರೆಯೂ ಭಾರತದಲ್ಲಿತ್ತು ” ಎನ್ನುವುದು ಬಹುಶಃ ಮುಂದಿನ ತಲೆಮಾರಿಗೆ ಐತಿಹ್ಯದಂತೆ ಕಾಣಬಹುದು. ಏಕೆಂದರೆ ಶ್ರದ್ಧಾ ವಾಲ್ಕರ್‌ ಘಟನೆಯಾಗಲೀ, ಹೆಗ್ಗೋಠಾರ ಘಟನೆಯಾಗಲೀ, ಪ್ರವೀಣ್‌ ನೆಟ್ಟಾರ್‌ ಹತ್ಯೆಯಾಗಲೀ, ಆಡಳಿತಾರೂಢ ಪಕ್ಷಗಳು ಮತ್ತು ಸಂಬಂಧಪಟ್ಟ ಸಚಿವರು ನೈತಿಕ ಹೊಣೆಯನ್ನು ಹೊರುವುದಿಲ್ಲ. ಎಲ್ಲವೂ ಕಾನೂನು ಸುವ್ಯವಸ್ಥೆಯ ಒಂದು ಭಾಗವಾಗಿ ಮಾತ್ರವೇ ಕಾಣುತ್ತದೆ. ತಾವು ಪ್ರಮಾಣೀಕರಿಸುವ ಸಂವಿಧಾನದ ಅನುಸಾರ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಿದ್ದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂಬ ಅರಿವು ಆಡಳಿತ ವ್ಯವಸ್ಥೆಯಲ್ಲಿರುವವರಿಗೂ ಇರುವುದಿಲ್ಲ.

ಸಂವಿಧಾನವನ್ನು ನಾವು ಚರಿತ್ರೆಯ ಒಂದು ಅಮೂಲ್ಯ ಗ್ರಂಥ ಎಂದು ಭಾವಿಸಿರುವುದು ಸಹಜವೇ. ಆದರೆ ಇದಕ್ಕಿಂತಲೂ ಮಿಗಿಲಾಗಿ ಅದು ಭವಿಷ್ಯ ಭಾರತದ ದಿಕ್ಸೂಚಿ ಗ್ರಂಥ ಎನ್ನುವುದನ್ನೂ ಮನಗಾಣಬೇಕಿದೆ. ಸಂವಿಧಾನವನ್ನು ಭೂತದಲ್ಲಿಟ್ಟು ನರ್ತಿಸುವುದಕ್ಕಿಂತಲೂ ಹೆಚ್ಚಾಗಿ, ಭವಿಷ್ಯದತ್ತ ಮುಖ ಮಾಡಿರುವ ಭಾರತೀಯ ಸಮಾಜದ ದಿಕ್ಸೂಚಿಯಂತೆ ಭಾವಿಸುವುದು ಇಂದಿನ ತುರ್ತು ನವಂಬರ್‌ 26ರಂದು ದೇಶಾದ್ಯಂತ ಪಠಿಸಲಾಗುವ “ ಸಂವಿಧಾನ ಪೀಠಿಕೆ ”ಯಲ್ಲಿನ ಪ್ರತಿಯೊಂದು ಅಕ್ಷರದ ಹಿಂದೆ ಒಂದು ಧ್ಯೇಯವಿದೆ. ಪ್ರತಿಯೊಂದು ಆಶಯ ವಾಕ್ಯದ ಹಿಂದೆಯೂ ಭಾರತದ ಭವಿಷ್ಯ ಅಡಗಿದೆ. ಸಮ ಸಮಾಜದ ಕನಸು ಹೊತ್ತು ರೂಪಿಸಲಾಗಿರುವ ಭಾರತದ ಸಂವಿಧಾನವನ್ನು ಎದೆಗೊತ್ತಿಕೊಳ್ಳುವ ಪ್ರತಿಯೊಬ್ಬ ಭಾರತದ ಪ್ರಜೆಯೂ, ಆಳುವ ವ್ಯವಸ್ಥೆಯ ಪ್ರತಿಯೊಬ್ಬ ಪ್ರತಿನಿಧಿಯೂ, ಸಂವಿಧಾನದ ಈ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಿದರೆ ಮಾತ್ರವೇ ನವಂಬರ್‌ 26ರ ಆಚರಣೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಇಲ್ಲವಾದಲ್ಲಿ ಇದು ಮತ್ತೊಂದು ಆತ್ಮವಂಚಕ ಆಚರಣೆಯಾಗಿ ಉಳಿದುಬಿಡುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ