ಚರಂಡಿ ಕಾಮಗಾರಿ ವಿಚಾರ: ಗ್ರಾ.ಪಂ. ಸದಸ್ಯರಿಂದ ಪರಸ್ಪರ ಕೆಸರೆರೆಚಾಟ!
ಕೊಟ್ಟಿಗೆಹಾರ: ‘ಬಿ’ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ನರೇಗಾ ಯೋಜನೆಯಲ್ಲಿನ ಬಾಕ್ಸ್ ಚರಂಡಿ ಕಾಮಗಾರಿಯ ಬಗ್ಗೆ ಗ್ರಾ.ಪಂ. ಸದಸ್ಯರಿಬ್ಬರು ಪ್ರತ್ಯೇಕವಾಗಿ ಪತ್ರಿಕಾ ಹೇಳಿಕೆ ನೀಡಿ ಆರೋಪ ಪ್ರತ್ಯಾರೋಪ ಮಾಡಿದ್ದಾರೆ.
ಬಿ ಹೊಸಹಳ್ಳಿ ಗ್ರಾ.ಪಂ ಸದಸ್ಯರಾದ ಶಿವಪ್ರಸಾದ್ ಬಿ.ಇ. ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಬಿ.ಹೊಸಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ನರೇಗಾ ಯೋಜನೆಯಲ್ಲಿನ ಬಾಕ್ಸ್ ಚರಂಡಿ ಕಾಮಗಾರಿ ಕಳಪೆಗುಣಮಟ್ಟದ್ದಾಗಿದ್ದು, ನಿರ್ಮಾಣಗೊಂಡ ಕೆಲವೇ ದಿನದಲ್ಲಿ ಕುಸಿದುಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಬಾಕ್ಸ್ ಚರಂಡಿ ಮಾತ್ರವಲ್ಲದೇ ಸ್ಮಶಾನ ಸುತ್ತ ಟ್ರಂಚಿಂಗ್ ಕಾಮಗಾರಿಯಲ್ಲಿ ಅವೈಜ್ಞಾನಿಕವಾಗಿ ಟ್ರಂಚ್ ನ ಅಗಲ ಜಾಸ್ತಿ ಮಾಡಿ, ಸಮರ್ಪಕ ನೀರಿನ ಓಟ ನೀಡದಿರುವುದು ಕೂಡ ಮೇಲುನೋಟಕ್ಕೆ ಕಳಪೆ ಕಾಮಗಾರಿಯಂತಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿ ವರ್ಷ ಪಂಚಾಯಿತಿ ಮಟ್ಟದ ಲೆಕ್ಕಪತ್ರಕ್ಕೆ ಸಂಬಂಧಪಟ್ಟಂತೆ ಆಡಿಟ್ ನಡೆಯುತ್ತಿದ್ದರು ಕೂಡ ಗುತ್ತಿಗೆದಾರರು ಯಾವುದೇ ಅಂಜಿಕೆ ಇಲ್ಲದೆ ಇಂತಹ ಕಳಪೆ ಕಾಮಗಾರಿಗಳನ್ನು ನಡೆಸುತ್ತಿರುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮತ್ತು ಅಧ್ಯಕ್ಷಾರಾದಿಯಾಗಿ ಚುನಾಯಿತ ಪ್ರತಿನಿಧಿಗಳ ಬಗ್ಗೆ ಜನಸಾಮಾನ್ಯರಲ್ಲಿ ಸಂಶಯ ಮೂಡುವಂತಿದೆ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆಯೇ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗುಣಮಟ್ಟದ ಬಗ್ಗೆ ಮತ್ತು ಕಳಪೆ ಕಾಮಗಾರಿಯ ಬಾಗವಾಗಿರುವ ತಪ್ಪಿತಸ್ಥರ ವಿರುದ್ದ ಕೂಡಲೇ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತ್ಯೇಕವಾಗಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಬಿ ಹೊಸಹಳ್ಳಿ ಗ್ರಾ.ಪಂ ಸದಸ್ಯರಾದ ಹೆಚ್.ಎಂ ಆಶ್ರಿತ್‍ಗೌಡ, ಬಿ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಾಕ್ಸ್ ಚರಂಡಿ ಕಾಮಗಾರಿಯ ಬಗ್ಗೆ ಗ್ರಾ.ಪಂ ಸದಸ್ಯರೊಬ್ಬರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಬಾಕ್ಸ್ ಚರಂಡಿ ಕಾಮಗಾರಿ ಹಸಿ ಇದ್ದಾಗಲೇ ಅತಿಯಾದ ಮಳೆ ಸುರಿದ ಕಾರಣ ಬಿರುಕು ಬಿಟ್ಟಿದ್ದು ಆ ಬಾಕ್ಸ್ ಚರಂಡಿಯ ಮೇಲೆ ರಾಜಕೀಯ ದ್ವೇಷ ಇರುವ ಕಿಡಿಗೇಡಿಗಳು ಟಿಪ್ಪರ್ ಹತ್ತಿಸಿ ಬಾಕ್ಸ್ ಚರಂಡಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಡವಲು ಅಷ್ಟು ಪ್ರಯತ್ನಿಸಿದರೂ ಅದೂ ಗಟ್ಟಿಯಾಗಿ ಉಳಿದಿರುವುದು ಅದರ ಉತ್ತಮ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಬಾಕ್ಸ್ ಸರಿಪಡಿಸಿ ನಂತರ ಬಿಲ್ಲು ಪಾವತಿಸಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಆರೋಪ ಮಾಡಿರುವ ಗ್ರಾ.ಪಂ ಸದಸ್ಯರು ಎಲ್ಲಾ ಕಾಮಗಾರಿಗಳನ್ನು ಅವರೇ ವಹಿಸಿಕೊಂಡು ನಿರ್ವಹಿಸಿ ಬಿಲ್ಲನ್ನು ಬೇರೆ ಗುತ್ತಿಗೆದಾರರ ಹೆಸರಲ್ಲಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka