37 ವರ್ಷಗಳ ಬಳಿಕ ಕರ್ನಾಟಕದಲ್ಲಿ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ ಮರುಜಾರಿ!: ಆದ್ರೆ ಹೊಸ ನಿಯಮಗಳು ಜಾರಿ - Mahanayaka

37 ವರ್ಷಗಳ ಬಳಿಕ ಕರ್ನಾಟಕದಲ್ಲಿ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ ಮರುಜಾರಿ!: ಆದ್ರೆ ಹೊಸ ನಿಯಮಗಳು ಜಾರಿ

students elections
26/08/2026

ಬೆಂಗಳೂರು: ಕರ್ನಾಟಕದ ಪದವಿಪೂರ್ವ (PU) ಮತ್ತು ಪದವಿ ಕಾಲೇಜುಗಳಲ್ಲಿ ಸುಮಾರು 37 ವರ್ಷಗಳ ಸುದೀರ್ಘ ನಿಷೇಧದ ಬಳಿಕ ವಿದ್ಯಾರ್ಥಿ ಸಂಘದ (ಯೂನಿಯನ್) ಚುನಾವಣೆಗಳನ್ನು ಮರುಜಾರಿಗೊಳಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ನಿರ್ಧರಿಸಿದೆ.

ವಿಕಾಸಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ವಿದ್ಯಾರ್ಥಿ ಹಂತದಿಂದಲೇ ನಾಯಕತ್ವದ ಗುಣಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಚುನಾವಣೆಗಳನ್ನು ಮರುಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ 15 ದಿನಗಳ ಒಳಗೆ ಇದಕ್ಕೆ ಸಂಬಂಧಿಸಿದ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ.

ಕಾಲೇಜು ಕ್ಯಾಂಪಸ್‌ ಗಳಲ್ಲಿ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಮತ್ತು ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಈಗ ಈ ದೀರ್ಘಕಾಲದ ನಿಷೇಧವನ್ನು ತೆರವುಗೊಳಿಸಿ, ಹಂತಹಂತವಾಗಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆಗಳು ಜರುಗಲಿವೆ. ಮೊದಲ ಹಂತದ ಯಶಸ್ಸನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಇದನ್ನು ವಿಸ್ತರಿಸಲಾಗುವುದು. ತದನಂತರ ಪ್ರತಿ ವರ್ಷವೂ ಏಕಕಾಲಕ್ಕೆ ಚುನಾವಣೆಗಳು ನಡೆಯಲಿವೆ.

ಚುನಾವಣೆಯ ನೆಪದಲ್ಲಿ ಕಾಲೇಜುಗಳಲ್ಲಿ ಗಲಾಟೆ ಅಥವಾ ರಾಜಕೀಯ ಪ್ರಭಾವ ಉಂಟಾಗದಂತೆ ತಡೆಯಲು ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ರೂಪಿಸಿದೆ:

ಸ್ಪರ್ಧಿಸುವ ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷಗಳ ವಿದ್ಯಾರ್ಥಿ  ಸಂಘಟನೆಗಳೊಂದಿಗೆ (ಉದಾಹರಣೆಗೆ ABVP, NSUI, SFI, AIDSO ಇತ್ಯಾದಿ) ಗುರುತಿಸಿಕೊಂಡಿರಬಾರದು. ರಾಜಕೀಯ ಬೆಂಬಲ ಪಡೆದರೆ ಅಭ್ಯರ್ಥಿಗಳನ್ನು ತಕ್ಷಣ ಅನರ್ಹಗೊಳಿಸಲಾಗುವುದು.

ಯಾವುದೇ ರಾಜಕೀಯ ನಾಯಕರು ಅಥವಾ ಹೊರಗಿನ ವ್ಯಕ್ತಿಗಳು ಕಾಲೇಜು ಆವರಣದೊಳಗೆ ಬಂದು ಭಾಷಣ ಮಾಡುವಂತಿಲ್ಲ ಅಥವಾ ಪ್ರಚಾರ ನಡೆಸುವಂತಿಲ್ಲ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶೈಕ್ಷಣಿಕ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು. ರಾಜಕೀಯ ಸಿದ್ಧಾಂತಗಳ ಪರ-ವಿರೋಧ ಚರ್ಚೆ ನಡೆಸುವಂತಿಲ್ಲ.

ವಿದ್ಯಾರ್ಥಿನಿಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿದ್ಯಾರ್ಥಿ ಸಂಘದ ಪ್ರಮುಖ ಸ್ಥಾನಗಳನ್ನು ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.  ಚುನಾವಣೆಯಲ್ಲಿ ಹಿಂಸಾಚಾರ ಅಥವಾ ಗೂಂಡಾಗಿರಿ ಪ್ರವೃತ್ತಿ ತೋರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi