ಸೆ.8 ಮಾತೆ ಮರಿಯಮ್ಮನವರ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ: ಹರ್ಷ ಮೆಲ್ವಿನ್ ಲಸ್ರಾದೊ
ಮೂಡಿಗೆರೆ: ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಾತೆ ಮರಿಯಮ್ಮನವರ ಜನ್ಮದಿನ ಹಾಗೂ ಹೊಸಕ್ಕಿ ಹಬ್ಬಕ್ಕೆ ರಾಜ್ಯ ಸರ್ಕಾರವು ಒಂದು ದಿನದ ಸ್ಥಳೀಯ ಅಥವಾ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೈಸ್ತ ಸಮುದಾಯವು ಪೂರ್ವ ಕಾಲದಿಂದಲೂ ರಾಜ್ಯಾದ್ಯಂತ ಮಾತೆ ಮರಿಯಮ್ಮನವರ ಹಬ್ಬವನ್ನು ಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ ಎಂದಿದ್ದಾರೆ. ಈ ದಿನವನ್ನು ಕ್ರೈಸ್ತರ ಸಂಸ್ಕೃತಿಯ ಪ್ರತೀಕವಾದ ‘ಹೊಸಕ್ಕಿ ಹಬ್ಬ’ವನ್ನಾಗಿಯೂ ಆಚರಿಸಲಾಗುತ್ತದೆ. ಹಬ್ಬಕ್ಕೂ ಮುನ್ನ 9 ದಿನಗಳ ಕಾಲ ಬಾಲಿಕಾ ಮರಿಯಮ್ಮನವರ ಪ್ರತಿಮೆಗೆ ಹೂಪೂಜೆ ಸಲ್ಲಿಸಿ, ನೋವೇನಾ ಪ್ರಾರ್ಥನೆಗಳನ್ನು ನೆರವೇರಿಸಲಾಗುತ್ತದೆ.
ಆದರೆ ಇಂತಹ ಮಹತ್ವದ ಹಬ್ಬಕ್ಕೆ ಇದುವರೆಗೆ ಯಾವುದೇ ಸರ್ಕಾರಿ ಅಥವಾ ಸ್ಥಳೀಯ ರಜೆ ಇಲ್ಲದಿರುವುದು ಸಮುದಾಯದವರಿಗೆ ಬೇಸರ ತಂದಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ, ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ ಸೆಪ್ಟೆಂಬರ್ 8 ರಂದು ಒಂದು ದಿನದ ರಜೆ ಘೋಷಿಸುವ ಮೂಲಕ ಹಬ್ಬವನ್ನು ಕಳೆಕಟ್ಟಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























