ಕೌಕ್ರಾಡಿ: ಕೆಎಸ್ ಆರ್ ಟಿಸಿ ಬಸ್ — ಟಾಟಾ ಸಫಾರಿ ಕಾರು ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
ನೆಲ್ಯಾಡಿ: ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಡುಬೈಲು ಪರಕೆ ಎಂಬಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ ಕೆಎಸ್ ಆರ್ ಟಿಸಿ ಬಸ್ ಹಾಗೂ ಟಾಟಾ ಸಫಾರಿ ಕಾರು ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಕೌಕ್ರಾಡಿ ಗ್ರಾಮದ ಮೂಡುಬೈಲು ಪರಕೆ ತಲುಪುತ್ತಿದ್ದಂತೆ, ಧರ್ಮಸ್ಥಳ ಕಡೆಯಿಂದ ಅತಿವೇಗವಾಗಿ ಬಂದ ಟಾಟಾ ಸಫಾರಿ ಕಾರಿನ ಚಾಲಕ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದ ತೀವ್ರತೆಗೆ ಕೆಎಸ್ ಆರ್ ಟಿಸಿ ಬಸ್ ಹಾಗೂ ಟಾಟಾ ಸಫಾರಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಜ್ಜುಗೊಂಡು ನಜ್ಜುಗುಜ್ಜಾಗಿದೆ.
ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರಿಗೂ ಗಾಯಗಳಾಗಿದ್ದು, ತಕ್ಷಣವೇ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಪಘಾತಕ್ಕೀಡಾದ ಕಾರಿನ ಚಾಲಕ ಗೌತಮ್ ಸಿಂಗ್ ಎಂಬವರ ವಿರುದ್ಧ ಬಸ್ ಚಾಲಕ ಯತೀಶ್ ಕೆ. ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























