ಧಾರ್ಮಿಕ ಸ್ವಾತಂತ್ರ್ಯದ ಹೆಸರಿನ ಮಸೂದೆಗೆ ಮಧ್ಯಪ್ರದೇಶ ಸಚಿವ ಸಂಪುಟ ಒಪ್ಪಿಗೆ
ಭೋಪಾಲ್: ಧಾರ್ಮಿಕ ಸ್ವಾತಂತ್ರ್ಯ ಮಸೂದೆ-2020ಗೆ ಮಧ್ಯ ಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದ್ದು, ‘ಲವ್ ಜಿಹಾದ್’ ಹೆಸರಿನಲ್ಲಿ ಮಸೂದೆ ಜಾರಿ ಮಾಡಿರುವ ಮೂರನೇಯ ರಾಜ್ಯ ಮಧ್ಯಪ್ರದೇಶವಾಗಿದೆ.
ಈ ಮಸೂದೆಯ ಪ್ರಕಾರ ಅಪ್ರಾಪ್ತ ಬಾಲಕಿ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯ ಬಲವಂತದ ಮತಾಂತರದ ಪ್ರಯತ್ನಕ್ಕೆ ಕನಿಷ್ಠ 50 ಸಾವಿರ ದಂಡ ಮತ್ತು 2 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಬಲವಂತದ ಮತಾಂತರಕ್ಕೆ ಯತ್ನಿಸುವವರಿಗೆ 1 ರಿಂದ 5 ವರ್ಷದವರೆಗೆ ಶಿಕ್ಷೆ ಮತ್ತು ಕನಿಷ್ಠ 25 ಸಾವಿರ ದಂಡವನ್ನೂ ವಿಧಿಸುವ ಅವಕಾಶವಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಮತಾಂತರವಾಗುವ ಇಚ್ಛೆಯುಳ್ಳವರು ಎರಡು ತಿಂಗಳ ಮೊದಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿರಬೇಕು ಎಂಬ ಆಯ್ಕೆಯನ್ನೂ ನೀಡಲಾಗಿದೆ. ಡಿಸೆಂಬರ್ 28 ರಿಂದ ನಡೆಯಲಿರುವ ಮೂರು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ.
ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಉತ್ತರಪ್ರದೇಶ ಸರ್ಕಾರ ಈ ಕಾನೂನನ್ನು ಜಾರಿ ಮಾಡಿದ್ದರೂ, ಇದು ಪ್ರತಿಫಲ ನೀಡಿಲ್ಲ. ಬಲವಂತದ ಮತಾಂತರ ಹಾಗೂ ಬಲವಂತದ ಮದುವೆಗೆ ಸಂಬಂಧಿಸಿದಂತೆ ಭಾರತೀಯ ಸಂವಿಧಾನದಲ್ಲಿ ಈಗಾಗಲೇ ಕಠಿಣ ಕಾನೂನುಗಳಿವೆ. ಆದರೆ, ಮತಾಂತರವನ್ನು ನಾವು ತಡೆಯಲು ಹೊಸ ಕಾನೂನು ತಂದಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ -1968 ಕ್ಕೆ ಪರ್ಯಾಯ ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂದು ಹೇಳಲಿದೆ. ಆದರೆ ಆ ಕಾನೂನಿನಲ್ಲಿ ಏನು ಸಮಸ್ಯೆ ಇದೆ ಎಂದು ಹೇಳುತ್ತಿಲ್ಲ.
ಈ ಕಾನೂನನ್ನು ಜಾರಿ ಮಾಡಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈಗಾಗಲೇ ಮುಖಭಂಗ ಅನುಭವಿಸಿದ್ದಾರೆ. ಈ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾದ ಇಬ್ಬರು ಮುಸ್ಲಿಮ್ ಯುವಕರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.