ಉಚಿತ ಅಕ್ಕಿಯನ್ನು ಮದ್ಯಕ್ಕಾಗಿ ಮಾರಿದ ತಂದೆ: ಆಹಾರವಿಲ್ಲದೇ 2 ವರ್ಷದ ಮಗು ಸಾವು!
ತಿರುವನಂತಪುರ/ಆಲಪುಳ: ಕೇರಳದ ಆಲಪುಳ ಜಿಲ್ಲೆಯ ಕಾರ್ತಿಕಪಳ್ಳಿಯಲ್ಲಿ ಅಪೌಷ್ಟಿಕತೆಯಿಂದ ಎರಡು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆಯ ವಿರುದ್ಧ ಸ್ಥಳೀಯ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕಾರ್ತಿಕಪಳ್ಳಿಯ ವಲಿಯಕುಳಂಗರ ತೈಮುತ್ತಿಲ್ ವಾಸಿ ರಾಜೇಶ್ ಮತ್ತು ತಾರಾ ದಂಪತಿಯ ಆರನೇ ಮಗುವಾದ ರಾಹುಲ್ (2) ಮೃತಪಟ್ಟ ಮಗು. ತಾಯಿ ತಾರಾ ಅವರು ಹೆರಿಗೆಗಾಗಿ ಆಲಪುಳ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರಿಂದ, ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ತಂದೆ ರಾಜೇಶ್ ಮತ್ತು ಮಕ್ಕಳು ಮಾತ್ರ ಇದ್ದರು. ಭಾನುವಾರ ಬೆಳಿಗ್ಗೆ 6:30ರ ಸುಮಾರಿಗೆ ಮಗು ಚಲನವಲನವಿಲ್ಲದೆ ಬಿದ್ದಿರುವುದು ಬೆಳಕಿಗೆ ಬಂದಿದೆ.
ಮಗುವಿನ ಸಾವಿನ ಕುರಿತು ಕಾರ್ತಿಕಪಳ್ಳಿಯಲ್ಲಿ 9ನೇ ವಾರ್ಡ್ ಸದಸ್ಯ ವಿನೀತ್ ಮಾಧ್ಯಮಗಳೊಂದಿಗೆ ಮಾತನಾಡಿ, ತಂದೆ ರಾಜೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಸರ್ಕಾರದ ಮೂಲಕ ದೊರೆತ ಉಚಿತ ಅಕ್ಕಿಯನ್ನು ರಾಜೇಶ್ ಹೋಟೆಲ್ ಒಂದಕ್ಕೆ ಮಾರಿ ಹಣ ಪಡೆದಿದ್ದಾನೆ. ಕಳೆದ ತಿಂಗಳು ವಿತರಿಸಲಾದ 20 ಕೆ.ಜಿ ಅಕ್ಕಿಯಲ್ಲಿ ಹೆಚ್ಚಿನ ಭಾಗವನ್ನು ಆತ ಸ್ಥಳೀಯ ಹೋಟೆಲ್ ಒಂದಕ್ಕೆ 500 ರೂಪಾಯಿಗೆ ಮಾರಾಟ ಮಾಡಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
ಮದ್ಯವ್ಯಸನಿಯಾಗಿದ್ದ ತಂದೆ:
ರಾಜೇಶ್ ಕಡು ಮದ್ಯವ್ಯಸಿಯಾಗಿದ್ದು, ಮಗು ರಾಹುಲ್ ಮೃತಪಟ್ಟ ದಿನದಂದೂ ಸಹ ಆತ ಮದ್ಯ ಸೇವಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಗುವಿಗೆ ಜನ್ಮಜಾತ ಆರೋಗ್ಯ ಸಮಸ್ಯೆಗಳಿದ್ದರೂ ಸಹ, ಅಪೌಷ್ಟಿಕತೆಯಿಂದ ಉಂಟಾದ ರಕ್ತಹೀನತೆ (Anemia) ಯೇ ಸಾವಿಗೆ ಮುಖ್ಯ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿರುವುದಾಗಿ ತ್ರಿಕ್ಕುನ್ನುಪುಳ ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ರಕ್ಷಣೆ ವಹಿಸಿಕೊಂಡ ಮಕ್ಕಳ ಕಲ್ಯಾಣ ಸಮಿತಿ:
ರಾಹುಲ್ ದುರ್ಮರಣದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಕುಟುಂಬದ ಉಳಿದ ನಾಲ್ಕು ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ (District Child Welfare Committee) ವಶಕ್ಕೆ ಪಡೆದುಕೊಂಡಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.




























