ಪತ್ನಿಯರಿಗೆ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ: ರಹಸ್ಯ ಗ್ರೂಪ್ ಗಳಲ್ಲಿ ವಿಡಿಯೋ ಹಂಚುತ್ತಿದ್ದರು: ಬೆಚ್ಚಿಬೀಳಿಸಿದ ಸೆಕ್ಸ್ ಕ್ರೈಮ್ ಜಾಲ - Mahanayaka

ಪತ್ನಿಯರಿಗೆ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ: ರಹಸ್ಯ ಗ್ರೂಪ್ ಗಳಲ್ಲಿ ವಿಡಿಯೋ ಹಂಚುತ್ತಿದ್ದರು: ಬೆಚ್ಚಿಬೀಳಿಸಿದ ಸೆಕ್ಸ್ ಕ್ರೈಮ್ ಜಾಲ

sex crime
08/07/2026

ಲಂಡನ್: ಇಂಟರ್ನೆಟ್‌ ನ ಕರಾಳ ಲೋಕದಲ್ಲಿ (ಡಾರ್ಕ್ ವೆಬ್) ಅಡಗಿ ಕುಳಿತು, ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಕೃತ್ಯ ಎಸಗುತ್ತಿದ್ದ ಅಂತರರಾಷ್ಟ್ರೀಯ ಸೆಕ್ಸ್ ಕ್ರೈಮ್ ಜಾಲವೊಂದನ್ನು ಜಾಗತಿಕ ಪೊಲೀಸ್ ಪಡೆಗಳು ಯಶಸ್ವಿಯಾಗಿ ಪತ್ತೆಹಚ್ಚಿವೆ. ಏಳು ದೇಶಗಳಲ್ಲಿ ಹರಡಿಕೊಂಡಿದ್ದ ಈ ಭೀಕರ ಜಾಲವು, ಸ್ವಂತ ಪತ್ನಿಯರಿಗೇ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗುತ್ತಿದ್ದರು ಹಾಗೂ ಅದರ ವಿಡಿಯೋಗಳನ್ನು ರಹಸ್ಯ ಗ್ರೂಪ್‌ ಗಳಲ್ಲಿ ಹಂಚಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ವಿಷಯ ಬಯಲಾಗಿದೆ.

ಬ್ರಿಟನ್‌ ನ ನ್ಯಾಷನಲ್ ಕ್ರೈಮ್ ಏಜೆನ್ಸಿ (NCA) ಮತ್ತು ಯುರೋಪೋಲ್ ನೇತೃತ್ವದಲ್ಲಿ ಜರ್ಮನಿ, ಯುಎಸ್, ಬ್ರೆಜಿಲ್, ಕೆನಡಾ, ಫ್ರಾನ್ಸ್, ಹಂಗೇರಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ ದೇಶಗಳ ಭದ್ರತಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ‘ಪ್ರಾಜೆಕ್ಟ್ ಮೆಡೂಸಾ’ (Project Medusa) ಕಾರ್ಯಾಚರಣೆಯ ಮೂಲಕ ಈ ಕರಾಳ ಜಾಲದ ಮುಖವಾಡ ಕಳಚಲಾಗಿದೆ. ಈವರೆಗೆ 150ಕ್ಕೂ ಹೆಚ್ಚು ಅಪರಾಧಿಗಳು ಮತ್ತು ಸಂತ್ರಸ್ತರನ್ನು ಗುರುತಿಸಲಾಗಿದ್ದು, 57 ಜನರನ್ನು ಬಂಧಿಸಲಾಗಿದೆ.

ಡಿಜಿಟಲ್ ಲೋಕದ ಕ್ರೂರ ಜಾಲ:

ಈ ಜಾಲದ ಕಾರ್ಯಾಚರಣೆಯ ವಿಧಾನ ಅತ್ಯಂತ ಸಂಕೀರ್ಣ ಮತ್ತು ಭಯಾನಕವಾಗಿತ್ತು. ಇವರು ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್‌ ಗಳು ಮತ್ತು ರಹಸ್ಯ ಚಾಟ್ ಗ್ರೂಪ್‌ ಗಳ ಮೂಲಕ ಸಂಪರ್ಕದಲ್ಲಿದ್ದರು. ಈ ಗ್ರೂಪ್‌ ಗಳಲ್ಲಿ  ಸಂತ್ರಸ್ತರನ್ನು ಬೇಗನೆ ಪ್ರಜ್ಞೆ ತಪ್ಪಿಸಲು ಬಳಸಬೇಕಾದ ಡ್ರಗ್ಸ್ ಮತ್ತು ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಹೈ-ಡೋಸ್ ಔಷಧಿಗಳ ಮಾಹಿತಿ. ಈ ಮಾದಕ ದ್ರವ್ಯಗಳನ್ನು ಆಹಾರ ಅಥವಾ ಪಾನೀಯಗಳಲ್ಲಿ ಹೇಗೆ ಬೆರೆಸಬೇಕು ಮತ್ತು ಯಾವುದೇ ಪ್ರಾಣಾಪಾಯವಾಗದಂತೆ ದೀರ್ಘಕಾಲದವರೆಗೆ ಹೇಗೆ ಪ್ರಜ್ಞಾಹೀನ ಸ್ಥಿತಿಯಲ್ಲಿಡಬೇಕು ಎಂಬ ಮಾರ್ಗದರ್ಶನ. ವೈದ್ಯಕೀಯ ತಪಾಸಣೆಯಲ್ಲಿ ಡ್ರಗ್ಸ್ ಪತ್ತೆಯಾಗದಂತೆ ಎಷ್ಟು ಸಮಯದ ನಂತರ ಅತ್ಯಾಚಾರ ನಡೆಸಬೇಕು ಎಂಬ ‘ತಜ್ಞರ’ ಸಲಹೆಗಳಿದ್ದವು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಮ್ಮದೇ ಸಂಗಾತಿಗಳ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋಗಳು ಮತ್ತು ಫೋಟೋಗಳನ್ನು ಗ್ರೂಪ್‌ ನ ಇತರ ಸದಸ್ಯರೊಂದಿಗೆ ಲೈವ್ ಆಗಿ ಅಥವಾ ರೆಕಾರ್ಡ್ ಮಾಡಿ ಹಂಚಿಕೊಳ್ಳುತ್ತಿದ್ದರು.

ಯುರೋಪೋಲ್ ಅಧಿಕಾರಿಗಳ ಪ್ರಕಾರ, ಈ ಗ್ರೂಪ್‌ ನಲ್ಲಿದ್ದ ಪುರುಷರು ಮಹಿಳೆಯರನ್ನು ಕೇವಲ ಒಂದು ‘ವಸ್ತು’ವಿನಂತೆ ನೋಡುತ್ತಿದ್ದರು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯರಿಗೆ ತಮಗೆ ಇಂತಹ ದ್ರೋಹ ಮತ್ತು ದೌರ್ಜನ್ಯ ನಡೆದಿದೆ ಎಂಬ ವಿಷಯವೇ ತಿಳಿದಿರುವುದಿಲ್ಲ. ಇದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇತ್ತೀಚೆಗೆ ಫ್ರಾನ್ಸ್‌ ನಲ್ಲಿ ಜಾಗತಿಕವಾಗಿ ಭಾರಿ ಸಂಚಲನ ಸೃಷ್ಟಿಸಿದ್ದ ಜಿಸೆಲ್ ಪೆಲಿಕೋಟ್ ಪ್ರಕರಣದ ತನಿಖೆಯ ಬೆನ್ನಲ್ಲೇ, ಜಗತ್ತಿನಾದ್ಯಂತ ಇಂತಹ ದೊಡ್ಡ ಜಾಲವೇ ಸಕ್ರಿಯವಾಗಿರುವುದು ಈ ಆಪರೇಷನ್ ಮೂಲಕ ಬೆಳಕಿಗೆ ಬಂದಿದೆ. ಸದ್ಯ ಅಂತಾರಾಷ್ಟ್ರೀಯ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಬಂಧಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ