ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ದಲಿತ ಕುಟುಂಬ! - Mahanayaka

ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ದಲಿತ ಕುಟುಂಬ!

ranebennuru
26/06/2021

ರಾಣೆಬೆನ್ನೂರು:  ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಜಾತಿ ಪೀಡಕನೋರ್ವ ಅಡ್ಡಿಪಡಿಸಿದ್ದರಿಂದ ದಲಿತ ಕುಟುಂಬವೊಂದು ಗ್ರಾಮ ಪಂಚಾಯತ್ ಎದುರೇ ಅಂತ್ಯಸಂಸ್ಕಾರ ನಡೆಸಲು ಮುಂದಾದ ಘಟನೆ ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಲಿತ ಕುಟುಂಬವೊಂದರ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ವೇಳೆ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಕಟ್ಟಿಗೆ ತೆಗೆದುಕೊಂಡು ಹೋಗುವ ವೇಳೆ ಜಾತಿ ಪೀಡಕನೋರ್ವ ಅಡ್ಡಿಪಡಿಸಿದ್ದಾನೆ. ಈ ಸ್ಮಶಾನ ನನ್ನ ಹೆಸರಿನಲ್ಲಿದೆ. ನಿಮ್ಮ ಜಾತಿಯವರ ಅಂತ್ಯಸಂಸ್ಕಾರ ಇಲ್ಲಿ ಮಾಡಬಾರದು ಎಂದು ಆತ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಜಾತಿಯ ಕಾರಣಕ್ಕೆ ಅಂತ್ಯಸಂಸ್ಕಾರ ನಡೆಸಲು ಕೂಡ ಬಿಡದ ವ್ಯವಸ್ಥೆ ಕಂಡು ರೋಸಿ ಹೋದ ಕುಟುಂಬಸ್ಥರು ಗ್ರಾಮ ಪಂಚಾಯತ್ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಮತ್ತೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

ಇಷ್ಟೊಂದು ಆಧುನಿಕ ಕಾಲದಲ್ಲಿಯೂ ಜಾತಿಯ ವಿಚಾರದಲ್ಲಿ ಜನರು ಈ ರೀತಿಯಾಗಿ ವರ್ತಿಸುತ್ತಿದ್ದಾರೆಂದರೆ, ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದಾಗಿದೆ. ಇಷ್ಟಾದರೂ, ಸಮಾಜದಲ್ಲಿ ಜಾತಿ ಬೇಧ ಇಲ್ಲ ಎಂದು ವಾದಿಸುವವರಿಗೇನು ಕಡಿಮೆ ಇಲ್ಲ ಎಂಬಂತಾಗಿದೆ.

ಇತ್ತೀಚಿನ ಸುದ್ದಿ