ಗುಟ್ಕಾ, ಪಾನ್‌ ಮಸಾಲ ನಿಷೇಧ ಆದೇಶ ವಾಪಾಸ್: 2 ದಿನಗಳಲ್ಲಿ ‘ಡಿಕೆಶಿ ಸರ್ಕಾರ್’ ಯು-ಟರ್ನ್! - Mahanayaka

ಗುಟ್ಕಾ, ಪಾನ್‌ ಮಸಾಲ ನಿಷೇಧ ಆದೇಶ ವಾಪಾಸ್: 2 ದಿನಗಳಲ್ಲಿ ‘ಡಿಕೆಶಿ ಸರ್ಕಾರ್’ ಯು-ಟರ್ನ್!

gutka
14/08/2026

ಬೆಂಗಳೂರು: ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್ ಅಂಶವುಳ್ಳ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ವಿಧಿಸಲಾಗಿದ್ದ ಒಂದು ವರ್ಷದ ನಿಷೇಧ ಆದೇಶವನ್ನು ಕೇವಲ ಎರಡೇ ದಿನಗಳಲ್ಲಿ ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಈ ಆದೇಶವನ್ನು ತಕ್ಷಣವೇ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ಹಿತದೃಷ್ಟಿಯಿಂದ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಆಗಸ್ಟ್ 10, 2026 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಅಡಿಯಲ್ಲಿ ರಾಜ್ಯಾದ್ಯಂತ ಗುಟ್ಕಾ, ತಂಬಾಕು ಅಥವಾ ನಿಕೋಟಿನ್ ಮಿಶ್ರಿತ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ ಎಂದು ಆಗಸ್ಟ್ 12 ರಂದು ಮಾಧ್ಯಮಗಳಿಗೆ ತಿಳಿಸಲಾಗಿತ್ತು. ಆದೇಶ ಹೊರಬಿದ್ದ ಬೆನ್ನಲ್ಲೇ ಜನಪ್ರತಿನಿಧಿಗಳಿಂದ ಮತ್ತು ಅಡಿಕೆ ಬೆಳೆಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ತಮ್ಮ ಗಮನಕ್ಕೆ ತರದೆ ಹಾಗೂ ಚರ್ಚಿಸದೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಇಂತಹ ಮಹತ್ವದ ತೀರ್ಮಾನ ಕೈಗೊಂಡಿರುವುದಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಾತೀತ ಶಾಸಕರ ನಿಯೋಗ ಭೇಟಿ: ಬಿಜಿಪಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಡಿ. ಜಿ. ಶಾಂತನಗೌಡ ಅವರ ನೇತೃತ್ವದಲ್ಲಿ ಶಾಸಕರ ನಿಯೋಗವು ಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ನಿಷೇಧದಿಂದಾಗಿ ರಾಜ್ಯದ ಲಕ್ಷಾಂತರ ಅಡಿಕೆ ಬೆಳೆಗಾರರಿಗೆ ಮತ್ತು ಮಾರುಕಟ್ಟೆಗೆ ತೀವ್ರ ನಷ್ಟ ಉಂಟಾಗಲಿದೆ, ಆದ್ದರಿಂದ ತಕ್ಷಣವೇ ಆದೇಶವನ್ನು ಹಿಂಪಡೆದು ರೈತರ ಹಿತ ಕಾಯಬೇಕು ಎಂದು ನಿಯೋಗ ಒತ್ತಾಯಿಸಿತು.

ಆದೇಶ ಹಿಂಪಡೆತ

ನಿಯೋಗದ ಮನವಿ ಹಾಗೂ ರೈತರ ಆತಂಕವನ್ನು ಪರಿಗಣಿಸಿದ ಮುಖ್ಯಮಂತ್ರಿಗಳು, ನಿಷೇಧ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ, ಜಾರಿಯಾದ ಎರಡೇ ದಿನಕ್ಕೆ ಗುಟ್ಕಾ ಮತ್ತು ಪಾನ್ ಮಸಾಲಾ ಮೇಲಿನ ನಿಷೇಧ ಆದೇಶ ಹಿಂಪಡೆದಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ