ಇಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಅರ್ಪಿಸಿದ ದಿನ - Mahanayaka
3:08 PM Saturday 12 - October 2024

ಇಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಅರ್ಪಿಸಿದ ದಿನ

26/11/2020

ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಂದು ಭಾರತಕ್ಕೆ ನೀಡಿದ ದಿನ. 1949 ರ ನವೆಂಬರ್ 26 ರಂದು ಭಾರತೀಯ ಸಂವಿಧಾನದ ಅಂತಿಮ ಕರಡನ್ನು ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ಬಾಬಾ ಸಾಹೇಬರು ನೀಡಿದರು.

ಭಾರತ ಸಂವಿಧಾನವು 1950 ಜನವರಿ 26ರಂದು ಜಾರಿಗೆ ಬಂತು. ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತಿದೆ. ಆದರೆ, ಇದನ್ನು ಸಂವಿಧಾನ ದಿನಾಚರಣೆಯಾಗಿ ಆಚರಿಸಬೇಕು ಎನ್ನುವ ಕೂಗು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಇಂತಹದ್ದೊಂದು ಬದಲಾವಣೆ ಬರಬಹುದು ಎಂದು ಜನರು ಆಶಿಸುತ್ತಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಬರೆಯಲು ತಮ್ಮ ಕುಟುಂಬ, ವೈಯಕ್ತಿಕ ಜೀವನ ಎಲ್ಲವನ್ನೂ ಮರೆತರು. ಸಂವಿಧಾನ ಬರೆಯುವ ಸಂದರ್ಭದಲ್ಲಿ ಅವರು ಸ್ವಲ್ಪವೂ ವಿಶ್ರಮಿಸದೇ ಕೆಲಸ ಮಾಡಿದ್ದರಿಂದಾಗಿ ಅನಾರೋಗ್ಯಕ್ಕೂ ಅವರು ತುತ್ತಾದರು. ಇದೇ ಅನಾರೋಗ್ಯವು ಕೊನೆಗೆ ಅವರ ಸಾವಿಗೂ ಕಾರಣವಾಯಿತು. ಹೀಗಾಗಿ ಭಾರತದ ಸಂವಿಧಾನಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಪ್ರಾಣವನ್ನೇ ನೀಡಿದ್ದಾರೆ.


ಸಂವಿಧಾನ ರಚನಾ ಸಭೆಯಲ್ಲಿ ಹಲವಾರು ಸದಸ್ಯರಿದ್ದರೂ ಕೂಡ ಸಂವಿಧಾನ ರಚನೆ ಮಾಡಿರುವುದ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಈ ವಿಚಾರವನ್ನು ಸಂವಿಧಾನ ರಚನಾ ಸಮಿತಿಯಲ್ಲಿದ್ದ ಟಿ.ಟಿ.ಕೃಷ್ಣಮಾಚಾರಿ ಅವರೇ ಹೇಳಿದ್ದಾರೆ. ಸಂವಿಧಾನ ಸಭೆಯಲ್ಲಿ ಮಾತನಾಡಿದ್ದ ಅವರು, ಸಭಾಧ್ಯಕ್ಷರೇ ಡಾ.ಅಂಬೇಡ್ಕರ್ ರವರ ಉಪನ್ಯಾಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಸಭಾಸದರಲ್ಲಿ ನಾನೂ ಒಬ್ಬ, ಈ ಸಂವಿಧಾನವನ್ನು ರಚಿಸುವುದಕ್ಕಾಗಿ ಅವರು ವಹಿಸಿದ ಅತಿಯಾದ ಶ್ರಮ ಹಾಗೂ ಆ ಬಗ್ಗೆ ಅವರಿಗಿದ್ದ ಉತ್ಸಾಹವನ್ನು ಕುರಿತು ನಾನು ತಿಳಿದಿದ್ದೇನೆ. ಶಾಸನ ಸಭೆಯಿಂದ ಸಂವಿಧಾನ ರಚನಾ ಸಮಿತಿಗೆ ನೇಮಕವಾದ ಏಳು ಮಂದಿಯಲ್ಲಿ ಒಬ್ಬರು ತಮ್ಮ ಕೆಲಸಕ್ಕೆ ರಾಜಿನಾಮೆಯನ್ನು ಕೊಟ್ಟರು. ಆ ಸ್ಥಾನವು ಈಗಲೂ ಖಾಲಿ ಇದೆ. ಒಬ್ಬರು ನಿಧನರಾದರು, ಆಸ್ಥಾನವು ಭರ್ತಿ ಮಾಡಲಾಗಿಲ್ಲ. ಇನ್ನೊಬ್ಬರು ಅಮೆರಿಕಾಕ್ಕೆ ಹೋಗಿ ಬಿಟ್ಟರು. ಮತ್ತೊಬ್ಬರು ರಾಜ್ಯದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ದೆಹಲಿಯಿಂದ ದೂರವಿರುವ ಒಂದಿಬ್ಬರಿಗೆ ತಮ್ಮ ಅನಾರೋಗ್ಯದ ನಿಮಿತ್ಯ ಬರುವುದಕ್ಕೆ ಸಾಧ್ಯವಾಗಿಲ್ಲ. ಅದರಿಂದ ಸಂವಿಧಾನ ರಚಿಸುವ ಸಂಪೂರ್ಣ ಜವಾಬ್ದಾರಿಯನ್ನು ಡಾ.ಅಂಬೇಡ್ಕರ್ ರವರದಾಯಿತು. ಅವರು ತಮ್ಮ ಆ ಕರ್ತವ್ಯವನ್ನು ಸಮರ್ಪಕವಾಗಿ ನೆರವೇರಿಸಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕಾಗಿದೆ. ಎಂದು ಹೇಳುವುದರಲ್ಲಿ ಯಾವ ಸಂದೇಹವು ಇಲ್ಲ (ಆಧಾರ: ಸಂವಿಧಾನ ಸಭೆಯ ಚರ್ಚಾ ಪುಸ್ತಕ. ಸಂಪುಟ.7. ಪುಟ.139./5.11.1948.) ಎಂದು ಹೇಳಿದ್ದರು.

ಹೀಗೆ ಸಂವಿಧಾನಕ್ಕಾಗಿ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಗಣರಾಜ್ಯೋತ್ಸವ ದಿನ ಎಂದು ಆಚರಿಸಿ, ಅಂಬೇಡ್ಕರ್ ಅವರ ಪರಿಶ್ರಮದ ಸಂವಿಧಾನ ದಿನಾಚರಣೆಯನ್ನು ಆಚರಿಸುವಾಗಲೂ, ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಗಾಂಧೀಜಿಯ ಫೋಟೋಕ್ಕೆ ಪೂಜೆ ಮಾಡಿ ಕಾರ್ಯಕ್ರಮ ಮುಗಿಸುವ ಬದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ತ್ಯಾಗ, ಪರಿಶ್ರಮ, ಬಲಿದಾನವನ್ನು ನೆನೆಯುವ ಕೆಲಸವಾಗಲಿ.

ಇತ್ತೀಚಿನ ಸುದ್ದಿ