ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆ ಐತಿಹಾಸಿಕ ಕ್ರಮ: ಕೇಂದ್ರ ಸಚಿವ ಅಮಿತ್ ಷಾ - Mahanayaka

ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆ ಐತಿಹಾಸಿಕ ಕ್ರಮ: ಕೇಂದ್ರ ಸಚಿವ ಅಮಿತ್ ಷಾ

amith shah
27/03/2023

ಬೆಂಗಳೂರು:  ಜಗತ್ತಿಗೆ ಲೋಕತಂತ್ರ ವ್ಯವಸ್ಥೆಯನ್ನು ಪರಿಚಯಿಸಿದ ಬಸವಣ್ಣನವರು, ದಕ್ಷ, ದೂರದೃಷ್ಟಿಯ ಆಡಳಿತ ನಿರ್ವಹಿಸಿದ ನಾಡಪ್ರಭು ಕೆಂಪೇಗೌಡರು ಈ ನಾಡಿನ ಸಾಮಾಜಿಕ ನ್ಯಾಯ,ಸಮಗ್ರ ಸರ್ವಾಂಗೀಣ ವಿಕಾಸಕ್ಕೆ ಮುನ್ನುಡಿ ಬರೆದ ಮಹಾನ್ ಚೇತನರಾಗಿದ್ದಾರೆ ಅವರ ಪ್ರತಿಮೆಗಳು ಲೋಕಾರ್ಪಣೆಯಾಗಿರುವುದು ಐತಿಹಾಸಿಕ ಕ್ರಮವಾಗಿದೆ.  ದೇಶಪ್ರೇಮ ಹಾಗೂ ಪ್ರಗತಿಯ ಬದ್ಧತೆಗಳೇ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆಯಾಗಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಹೇಳಿದರು.

ವಿಧಾನಸೌಧದ ಮುಂಭಾಗದಲ್ಲಿ ಇಂದು ಸಂಜೆ ಜಗಜ್ಯೋತಿ ಬಸವೇಶ್ವರರು ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ ಹಾಗೂ ನಮ್ಮ ಬೆಂಗಳೂರು ಹಬ್ಬ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಬಸವೇಶ್ವರರು ಹಾಗೂ ಕೆಂಪೇಗೌಡರು ಈ ಇಬ್ಬರು ಮಹಾನ್ ಚೇತನಗಳ ಪ್ರತಿಮೆಗಳು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪನೆಯಾಗಿರುವುದು ನಾಡಿಗೆ ಐತಿಹಾಸಿಕ ಸಂದರ್ಭವಾಗಿದೆ.ಲೋಕತಂತ್ರ ವ್ಯವಸ್ಥೆಯನ್ನು ಪರಿಚಯಿಸಿದ ಬಸವಣ್ಣನವರು,ದಕ್ಷ,ದೂರದೃಷ್ಟಿಯ ಆಡಳಿತ ನಿರ್ವಹಿಸಿದ ನಾಡಪ್ರಭು ಕೆಂಪೇಗೌಡರು ಈ ನಾಡಿನ ಸಾಮಾಜಿಕ ನ್ಯಾಯ,ಸಮಗ್ರ ಸರ್ವಾಂಗೀಣ ವಿಕಾಸಕ್ಕೆ ಮುನ್ನುಡಿ ಬರೆದ ಮಹಾನ್ ಚೇತನರಾಗಿದ್ದಾರೆ. ಶಕ್ತಿಯು ಕೇವಲ ಅಬ್ಬರದ ಧ್ವನಿಯಲ್ಲಿರುವುದಿಲ್ಲ ವಿಚಾರಪೂರ್ಣ ಆಡಳಿತದಲ್ಲಿ ಇರುತ್ತದೆ.ವಿಜಯನಗರದ ಅಚ್ಯುತದೇವರಾಯರ ಸಾಮಂತರಾಗಿದ್ದ ನಾಡಪ್ರಭು ಕೆಂಪೇಗೌಡರು ಅಂತಹ ದೂರದೃಷ್ಟಿಯ ಆಡಳಿತಗಾರರಾಗಿದ್ದರು ಎಂದರು.

ಕಲಾವಿದರು,ಸಾಹಿತಿಗಳು,ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ಮಹಾನ್ ವೇದಿಕೆ ಕಲ್ಪಿಸಿರುವ ಬೆಂಗಳೂರು ಹಬ್ಬ ನಡೆದಿರುವುದು ಸಂತಸದ ಸಂಗತಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ರಕ್ಷಣೆ,ವಾಯುಯಾನದ ಉದ್ಯಮದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ.ಬೆಂಗಳೂರಿನಂತಹ ಶಹರವನ್ನು ಕೊರೊನಾ ಸಾಂಕ್ರಾಮಿಕದಿಂದ ರಕ್ಷಿಸುವುದು ಸವಾಲಿನ‌ ಕಾರ್ಯವಾಗಿತ್ತು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಕ್ಷ ಆಡಳಿತದಿಂದ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.ಅಭಿವೃದ್ಧಿಯ ಪಥದ ಜೊತೆಗೆ ,ಈ ದೇಶದ ಸಂವಿಧಾನ ನೀಡಿರುವ ಮೀಸಲಾತಿ ಸೌಕರ್ಯವನ್ನು ಕೆಲ ಧರ್ಮಗಳು ಇದುವರೆಗೆ ಬಳಸಿಕೊಳ್ಳುತ್ತಿದ್ದವು,ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ರ ಮೀಸಲು ಪ್ರಮಾಣವನ್ನು ತೆಗೆದು ಹಾಕಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಮೀಸಲು ಕಲ್ಪಿಸಿರುವ ಮುಖ್ಯಮಂತ್ರಿಯವರ ಕ್ರಮ ಐತಿಹಾಸಿಕವಾಗಿದೆ ಎಂದರು.ಕೃಷ್ಣಾ ಮೇಲ್ದಂಡೆ,ಕಳಸಾ ಬಂಡೂರಿ,ಭದ್ರಾ ಮೇಲ್ದಂಡೆ ಯೋಜನೆಗಳು ಸೇರಿದಂತೆ ಬಂದರುಗಳ ಅಭಿವೃದ್ಧಿ ಮೊದಲಾದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಮರ್ಥವಾಗಿ ಅನುಷ್ಠಾನ ಮಾಡಿರುವುದು ಅಭಿವೃದ್ಧಿಯ ಇಚ್ಚಾಶಕ್ತಿಗೆ  ಸಾಕ್ಷಿಯಾಗಿದೆ .11 ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ವ್ಯವಸ್ಥೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ  ಕಳೆದ 9 ವರ್ಷಗಳ ಸಮರ್ಥ ಆಡಳಿತದಲ್ಲಿ  5 ನೇ ಸ್ಥಾನಕ್ಕೇರಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಏಕೀಕರಣಗೊಂಡ ಮೊದಲ ಹತ್ತು ವರ್ಷಗಳಲ್ಲಿಯೇ ವಿಧಾನಸೌಧಧ ಮುಂಭಾಗದಲ್ಲಿ ಬಸವಣ್ಣನವರು ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆಯಾಗಬೇಕಿತ್ತು.ಆಧುನಿಕ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಸೌಧವಾಗಿರುವ ವಿಧಾನಸೌಧದಲ್ಲಿನ ಚರ್ಚೆಗಳಲ್ಲಿ ಹಾಗೂ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಬಸವಣ್ಣನವರ ಅನುಭವ ಮಂಟಪದ ವಿಚಾರಗಳ ಮೌಲ್ಯಗಳು ನಿರಂತರವಾಗಿ ಸಾಗಬೇಕು.ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸದಾ ಕಾಲ ನಮಗೆ ಸ್ಫೂರ್ತಿಯಾಗಲಿವೆ ಎಂದರು.ಕೇವಲ 75 ದಿನಗಳ ಅಲ್ಪಾವಧಿಯಲ್ಲಿ ಈ ಪ್ರತಿಮೆಗಳನ್ನು ನಿರ್ಮಿಸಿದ ಜಾಹ್ನವಿ ಕಲಾ ಸಂಸ್ಥೆ ಹಾಗೂ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ ತಂಡಗಳನ್ನು ಮುಖ್ಯಮಂತ್ರಿಯವರು ಅಭಿನಂದಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಈ ನಾಡಿನ ಮಹಾನ್ ಚೇತನಗಳಾದ ಬಸವೇಶ್ವರರು ಹಾಗೂ ಕೆಂಪೇಗೌಡರ ಪ್ರತಿಮೆಗಳನ್ನು ವಿಧಾನಸೌಧದ ಎದುರು ಸ್ಥಾಪಿಸಬೇಕೆಂಬ ಬಹಳ ವರ್ಷಗಳ ಕನಸು,ನನಸಾಗಿರುವುದು ಸಂತಸ ತಂದಿದೆ.12 ನೇ ಶತಮಾನದಲ್ಲಿಯೇ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಜನಿಸಿರುವ ನಾವೆಲ್ಲ ಪುಣ್ಯವಂತರು.ಬೆಂಗಳೂರು ಕಟ್ಟಿದ ಕೆಂಪೇಗೌಡರು ಹಲವಾರು ಕೆರೆ,ಕಟ್ಟೆಗಳನ್ನು ನಿರ್ಮಿಸಿ ದೂರದೃಷ್ಟಿಯ ಮೂಲಕ ಬೆಂಗಳೂರು ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು .ಈ ಮಹಾನ್ ನಾಯಕರ ತತ್ವ,ಆದರ್ಶಗಳನ್ನು  ನಾವೆಲ್ಲರೂ ಅಳವಡಿಸಿಕೊಂಡು ಪಾಲಿಸಬೇಕು ಎಂದರು.

ಆದಿಚುಂಚನಗಿರಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ,ಸುತ್ತೂರಿನ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಪೇಜಾವರ ವಿಶ್ವಪ್ರಸನ್ನತೀರ್ಥಶ್ರೀಗಳು,ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ವಚನಾನಂದ ಶ್ರೀಗಳು, ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ,ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಚಿವರಾದ ಆರ್.ಅಶೋಕ, ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ,ಗೋವಿಂದ ಕಾರಜೋಳ, ಸಿ.ಎನ್.ಆಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಮುನಿರತ್ನ,ಸಂಸದರಾದ  ತೇಜಸ್ವಿಸೂರ್ಯ, ಪಿ.ಸಿ.ಮೋಹನ್ ಸೇರಿದಂತೆ ಅನೇಕ ಶಾಸಕರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ