ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ವಿವಾದಾತ್ಮಕ 2024ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು ಸೋಮವಾರ, ಅಕ್ಟೋಬರ್ 14ರಂದು ಸರ್ವಾನುಮತದಿಂದ ಅಂಗೀಕರಿಸಿತು. ಈ ಮಸೂದೆಯು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಒಕ್ಕೂಟ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿ ವಕ್ಫ್, ಹಜ್ ಯಾತ್ರೆ ಮತ್ತು ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಅವರು ನಿರ್ಣಯವನ್ನು ಮಂಡಿಸಿದರು.
ಮಸೂದೆಯು ವಕ್ಫ್ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ವಕ್ಫ್ ಮಂಡಳಿಗಳು ಮತ್ತು ನ್ಯಾಯಮಂಡಳಿಗಳ ಅಧಿಕಾರವನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸುತ್ತದೆ ಎಂದು ಅಬ್ದುಲ್ ರಹಿಮಾನ್ ವಾದಿಸಿದರು. “ಈ ಮಸೂದೆಯು ಸಂವಿಧಾನದಲ್ಲಿ ವಿವರಿಸಿರುವ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುವುದಲ್ಲದೇ ಚುನಾಯಿತ ಪ್ರತಿನಿಧಿಗಳ ಬದಲಿಗೆ ನಾಮನಿರ್ದೇಶಿತ ಸದಸ್ಯರ ಮಂಡಳಿ ಮತ್ತು ನಾಮನಿರ್ದೇಶಿತ ಅಧ್ಯಕ್ಷರನ್ನು ನೇಮಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರುತ್ತದೆ” ಎಂದು ಅವರು ಹೇಳಿದರು.
ನಂಬಿಕೆಯ ಸ್ವಾತಂತ್ರ್ಯ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ತತ್ವಗಳು ಸೇರಿದಂತೆ ಮೂಲಭೂತ ಹಕ್ಕುಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಚಿವರು ಒತ್ತಿ ಹೇಳಿದರು. ಈ ಮಸೂದೆಯು ಸಂವಿಧಾನದ ಅಡಿಪಾಯಕ್ಕೆ ವಿರುದ್ಧವಾದ ನಿಬಂಧನೆಗಳನ್ನು ಒಳಗೊಂಡಿದೆ ಮತ್ತು ಕೇಂದ್ರ ಸರ್ಕಾರವು ಅದನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಕರೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth