ಲಂಚ ಸ್ವೀಕರಿಸಿದ ಅಧಿಕಾರಿಗೆ 1 ಕೋಟಿ ರೂಪಾಯಿ ದಂಡ, 4 ವರ್ಷ ಜೈಲು ಶಿಕ್ಷೆ
ಮಂಗಳೂರು: ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಶಿವಲಿಂಗ ಕೊಂಡಗುಳಿ ಅವರಿಗೆ 1 ಕೋಟಿ ರೂಪಾಯಿ ದಂಡ, ನಾಲ್ಕು ವರ್ಷಗಳ ಸಾದಾ ಶಿಕ್ಷೆ ವಿಧಿಸಿ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಆರೋಪಿ ಶಿವಲಿಂಗ ಕೊಂಡಗುಳಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂಬ ಮಾಹಿತಿ ಮೇರೆಗೆ 2013ರ ಫೆಬ್ರವರಿ 15ರಂದು ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಸತ್ರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ನ್ಯಾಯಾಧೀಶ ಬಿ.ಬಿ. ಜಕಾತಿ ಇಂದು ಅಂತಿಮ ತೀರ್ಪು ನೀಡಿದ್ದಾರೆ.
ಆರೋಪಿ ವಿರುದ್ಧ ಕಲಂ 13(1) (ಇ) ಜತೆಗೆ 13(2) ಲಂಚ ನಿರೋಧ ಕಾಯ್ದೆ 1988ರಂತೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ವರ್ಷ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ನೀಡಲಾಗಿದೆ.
ಹಾಲಿ ಶಿವಾನಂದ ಕುಂಡಗುಳಿ ಹಿರಿಯ ನೈರ್ಮಲ್ಯ ನಿರೀಕ್ಷರಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಮಂಗಳೂರು ಪೊಲೀಸ್ ಉಪಾಧೀಕ್ಷಕರಾದ ಉಮೇಶ್ ಜಿ. ಶೇಟ್ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮಂಗಳೂರು ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka