ಸಂವಿಧಾನದ ಉಳಿವಿಗಾಗಿ ಒಂದಾಗೋಣ - Mahanayaka

ಸಂವಿಧಾನದ ಉಳಿವಿಗಾಗಿ ಒಂದಾಗೋಣ

constitution of india
12/10/2024

  • ದಮ್ಮಪ್ರಿಯ,  ಬೆಂಗಳೂರು

ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ  ಬಹು ಮುಖ್ಯ ವಿಷಯವೇ ಒಳಮೀಸಲಾತಿ.  ಈ ವಿಚಾರ ದಲಿತ ಚಿಂತಕರನ್ನು ಮತ್ತು ಪ್ರಜ್ಞಾವಂತರನ್ನು  ಬಹಳ ಚೆನ್ನಾಗಿ ದಿಕ್ಕು ತಪ್ಪಿಸುತ್ತಿದೆ  ಎನ್ನುವುದರಲ್ಲಿ ಅನುಮಾನವೇ ಇಲ್ಲವಾಗಿದೆ. ಅದೆಷ್ಟೋ ದಲಿತ ಪ್ರಜ್ಞಾವಂತರ ಮೆದುಳಿಗೆ ಬೇಡಿ ಹಾಕಿದಂತಾಗಿದೆ.  ಇಲ್ಲಿಯವರೆವಿಗೂ ಮೀಸಲಾತಿಯನ್ನೇ ವಿರೋಧಿಸಿ ದೇಶವನ್ನು ಆಳ್ವಿಕೆ ನಡೆಸಿದವರು ಈ ದೇಶದ ಮನುವಾದಿಗಳು.  ಇಂದು  ದಲಿತರಲ್ಲಿ ಒಳಮೀಸಲಾತಿಯ ಕಿಚ್ಚನ್ನು ಹಚ್ಚಿ ಒಟ್ಟಾಗುತ್ತಿದ್ದ ದಲಿತ ಸಮುದಾಯದ ಉಪ ಜಾತಿಗಳನ್ನು ಹೊಡೆದು ಆಳುವ ಹುನ್ನಾರವನ್ನು ಪ್ರಾರಂಭಿಸಿವೆ. ಇಂತಹ ಹೊಡೆದು ಆಳುವ ನೀತಿಯನ್ನು ದಲಿತರು ಇಂದಿಗೂ ತಮಗರಿವಿಲ್ಲದಂತೆ  ಒಳಮೀಸಲಾತಿಯ ಗುಂಗಿನಲ್ಲಿದ್ದಾರೆ. ಅಲ್ಲದೆ   ಒಬ್ಬರನ್ನೊಬ್ಬರು ದೂಷಿಸಿಕೊಂಡು ಸರ್ಕಾರದ ಮುಂದೆ ತಮ್ಮ ತಮ್ಮ ಅಹವಾಲುಗಳನ್ನು ಸಲ್ಲಿಸುವುದರಲ್ಲಿಯೇ ಮುಂದಾಗಿದ್ದಾರೆ.  ಹೇಗಿದೆ ನಮ್ಮ ಬ್ರಾಹ್ಮಣವಾದದ ಮಾನಸ್ಥಿತಿ. (ಸೈಕಲಾಜಿಕಲ್ ಗೇಮ್ )

ದಲಿತರಲ್ಲಿ  AD AK ಲಂಬಾಣಿ, ಬೋವಿ ಇತರೆ ಯಾವುದೇ ಜಾತಿಗಳಲ್ಲಿನ ಜನರು  ಎಷ್ಟೇ ಉನ್ನತ ಹುದ್ದೆಯನ್ನು ಅನುಭವಿಸಿದ್ದರು, ಅಂತಹ ಮಹಾನುಭಾವರು ಬಾಬಾಸಾಹೇಬರು ನೀಡಿದ ಎಲ್ಲ ಸವಲತ್ತುಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಅನುಭವಿಸಿ ಇಂದು  AD ಯವರನ್ನು ಕಂಡರೆ AK ಯವರಿಗೆ ಆಗಬಾರದು,  AK ಯವರನ್ನು ಕಂಡರೆ AD ಯವರಿಗೆ ಆಗಬಾರದು,  ಇವರಿಬ್ಬರನ್ನು ಕಂಡರೆ ಬೋವಿ ಸಮುದಾಯಕ್ಕೆ ಆಗಬಾರದು.  ಇವರೆಲ್ಲರನ್ನು  ಮೀರಿ  ಲಂಬಾಣಿ ಸಮುದಾಯ ಮುಂದೆ ಬರುತ್ತಿದೆ ಎನ್ನುವ ಹಾಗೆ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ  ಒಳ್ಳೆಯ ಮಾನಸಿಕ ಗೇಮ್ ಆಡಲು ಮುಂದಾಗಿದ್ದಾರೆ.

ಉನ್ನತ ಅಧಿಕಾರದಲ್ಲಿದ್ದು, ಎಲ್ಲವನ್ನು ಅನುಭವಿಸುವಾಗ ಯಾಕೆ ಇವರುಗಳೆಲ್ಲಾ ಒಳಮೀಸಲಾತಿಯನ್ನು ಕೇಳಲಿಲ್ಲಾ !! ಆಗ ಇಲ್ಲದ ಒಳ ಮೀಸಲಾತಿಯ ಪ್ರಜ್ಞೆಯನ್ನು  ಈಗ  ಇವರ ಮೆದುಳಿಗೆ ಹಾಕಿದವರು ಯಾರು ?.  ಅಂದು ಇವರಿಗೆಲ್ಲ   ಬಾಬಾಸಾಹೇಬರ ಚಿಂತನೆಗಳು ಅರ್ಥವಾಗಿರಲಿಲ್ಲವೇ ,  ಹಾಗಾದರೆ ಇವರ ಮೂಲ ಉದ್ದೇಶವಾದರೂ ಏನಿರಬಹುದು ? ಇವೆಲ್ಲವೂ  ಇನ್ನೊಂದು ರೀತಿಯಲ್ಲಿ  ದಲಿತ ಸಮುದಾಯಕ್ಕೆ, ಶೋಷಿತ ಸಮಾಜಕ್ಕೆ,  ಬಾಬಾಸಾಹೇಬರ ಸಂವಿಧಾನದ ಆಶಯಗಳಿಗೆ ಮಾಡುತ್ತಿರುವ ಮಹಾ ದ್ರೋಹವಲ್ಲವೇ ಒಮ್ಮೆ ನೀವೇ ಯೋಚಿಸಿ !!!.

ಬಾಬಾಸಾಹೇಬರು ತನ್ನ ಜನರಿಗೆ  “ಜಾಗೃತರಾಗಿ, ಚಿಂತಿಸಿ, ಒಂದಾಗಿ” ಎಂದರು.  ಆದರೆ ಇಂದು ನಾವು  ಮಾಡುತ್ತಿರುವುದಾದರೂ ಏನು ?ಅವರು  ಎಡಗೈನವರು , ಇವರು  ಬಲಗೈನವರು,  ಅವರು  ಮೇಲೆ, ಇವರು  ಕೆಳಗೆ  ಎಂತೆಲ್ಲಾ ಮಾತನಾಡಿಕೊಂಡು ಉದ್ದುದ್ದ  ಭಾಷಣ ಮಾಡುತ್ತಾ,  ತಮ್ಮ ಆಲೋಚನೆಗೆ ತಕ್ಕನಾದ  ಬರಹಗಳನ್ನು  ಬರೆದು   ಪ್ರಚಾರ ಮಾಡಿಕೊಳ್ಳುತ್ತಿರುವ ಇದರ  ಹಿಂದಿರುವ ಮೂಲ ಉದ್ದೇಶವಾದರೂ ಏನಿದೆ ?

ಬಾಬಾಸಾಹೇಬರ ಕನಸಿನಂತೆ ಒಂದಾಗುವುದೇ ಗಟ್ಟಿಯಾದ ನಿಲುವಾಗಿದ್ದರೆ  ಈ AD AK  ಯಂತಹ  ಒಳ ತಾರತಮ್ಯಗಳು ಏಕೆ ? ಇವುಗಳೆಲ್ಲ ಸಂವಿಧಾನದ ಹಕ್ಕುಗಳೇ ಎನ್ನುವುದು  ನಿಮ್ಮ ಗಟ್ಟಿಯಾದ ನಿಲುವುಗಳು ಆದರೆ,  ಬಾಬಾಸಾಹೇಬರ ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು ಎನ್ನುವ ನಿಲುವು ನಿಮ್ಮಗಳ ಮೆದುಳಿಗೆ ಏಕೆ ಹೋಗುತ್ತಿಲ್ಲಾ ? ಯಾರೋ ಮನುವಾದಿಗಳು ಹಚ್ಚಿರುವ ಇಂತಹ ಒಳ ಮೀಸಲಾತಿಯ ಗೊಂದಲಗಳಿಗೆ ಯಾಕೆ ನೀವುಗಳು ಸಾಮಾನ್ಯ ಜನರನ್ನು ಬಲಿಪಶುಗಳಾಗಿಸುತ್ತಿರುವಿರಿ.  ನಿಮಗೆ “ಪೊಲಿಟಿಕಲ್ ಪವರ್ ಮಾಸ್ಟರ್ ಕೀ ” ಎನ್ನುವುದು ಏಕೆ ಅರ್ಥವಾಗುತ್ತಿಲ್ಲ. ?

ಎಲ್ಲರು ಒಳ ಮೀಸಲಾತಿಯನ್ನು ಬೆಂಬಲಿಸಲೇಬೇಕು, ಮೀಸಲಾತಿಯನ್ನು ಗೌರವಿಸುವವರು ಒಳಮೀಸಲಾತಿಯನ್ನು ಗೌರವಿಸೋಣ ಎನ್ನುವುದೇ ಆದರೆ  ಅದು ಯಾವಾಗ ಹೇಗೆ  ಮತ್ತು ಎಷ್ಟರ ಮಟ್ಟಿಗೆ ಎನ್ನುವುದನ್ನು ಮೊದಲು ತೀರ್ಮಾನಿಸಬೇಕಲ್ಲವೇ ? ಸುಖ ಸುಮ್ಮನೆ ಆ ಆಯೋಗ ಇದನ್ನು ಹೇಳಿದೆ,  ಈ ಕಾಲಂ ಇದನ್ನು ಹೇಳುತ್ತಿದೆ,  ಅವರ ವರದಿ ಈಗಿದೆ ಏನಿದು ನಿಮ್ಮಗಳ ಮಾನಸಿಕ ತಳಮಳಗಳು ? ಬ್ರಾಹ್ಮಣತ್ವ ಎನ್ನುವುದು ಇಂದು ಗಾಳಿಯಲ್ಲಿ ಸೇರಿ ಎಲ್ಲರ ಮೆದುಳನ್ನು ಅವರಿಸಿ  ಗುಲಾಮಿ ಮನಸ್ಥಿತಿಯನ್ನು ನಿರ್ಮಾಣ ಮಾಡಿದೆ ಎನ್ನುವುದಕ್ಕೆ ಇದೆ ಮುಖ್ಯ ನಿದರ್ಶನ ಎನ್ನಬಹುದು.

ಒಳಮೀಸಲಾತಿ ಜಾರಿಯಾಗಬೇಕು ಎನ್ನುವವರು,  ಮೊದಲು ಈ ದೇಶದಲ್ಲಿ ಸಂವಿಧಾನ ಜಾರಿಯಾಗಿ  75 ವರ್ಷಗಳು ಕಳೆದರು  ಇಂದು ಅದರ ಆಶಯಗಳು ಜಾರಿಯಾಗಿಲ್ಲ,  ಇದನ್ನು ನೀವು ಒಪ್ಪುವುದಾದರೆ, ಮೊದಲು ಅವುಗಳನ್ನು ಜಾರಿಮಾಡುವ ಜಾಗದಲ್ಲಿ  ನೀವು ಕುಳಿತು ಜಾರಿಮಾಡಲು ಹೋರಾಡಬೇಕಲ್ಲವೇ ?  ಅದಕ್ಕಾಗಿ ಎಲ್ಲಾ ಶೋಷಿತ ಸಮುದಾಯಗಳು ಒಂದಾಗುವಂತೆ ಪ್ರೇರೇಪಿಸಬೇಕಲ್ಲವೇ.?  ನಂತರ ಒಳಮೀಸಲಾತಿ ಎನ್ನುವುದು ತನ್ನಷ್ಟಕ್ಕೆ ತಾನೇ ಜಾರಿ  ಆಗುತ್ತದೆ.

ಬುದ್ಧನ ಬಹುಜನ ಹಿತಾಯ ಬಹುಜನ ಸುಖಾಯ ಮೂಲ ಮಾತ್ರವೇ ಎಲ್ಲರು ಒಂದಾಗಬೇಕು ಎನ್ನುವುದೇ ಹೊರತು  ಎಲ್ಲರು ಕೇವಲ ಸವಲತ್ತುಗಳಿಗಾಗಿ,  ಅವಕಾಶಗಳಿಗಾಗಿ ಹೊಡೆದಾಡಿ ಎನ್ನುವುದಲ್ಲ.

ಮೊದಲು ರಾಜ್ಯಾಧಿಕಾರ ನಮ್ಮದಾಗಬೇಕು,  ಅಧಿಕಾರದ ಚುಕ್ಕಾಣಿಯನ್ನು ನನ್ನ ಜನರು ಹಿಡಿಯಬೇಕು ಎನ್ನುವ ಬಾಬಾಸಾಹೇಬರ ಕನಸುಗಳು ಇಂದಿಗೂ ಕನಸಾಗಿಯೇ ಉಳಿದಿವೆ.  ಇವತ್ತಿಗೂ ನಮ್ಮ ದಲಿತ ನಾಯಕರು ಒಂದಾಗಿ,  ಒಂದೇ, ಒಂದು ಬಾರಿ  ರಾಜ್ಯ ಸರ್ಕಾರವನ್ನು ರಚನೆ ಮಾಡುವ ಶಕ್ತಿ ಇಲ್ಲವಾಗಿರುವಾಗ, ಬಾಬಾಸಾಹೇಬರ ಕನಸುಗಳು ಹೇಗೆ ಈಡೇರಲು ಸಾಧ್ಯ ಒಮ್ಮೆ ಎಲ್ಲರು ಯೋಚಿಸಿ.

ಕೇವಲ 20 ರಿಂದ 30 MLA ಗಳನ್ನು ಗೆಲ್ಲುವ ಒಕ್ಕಲಿಗ ಸಮುದಾಯದ ಒಬ್ಬ ನಾಯಕನಿಗೆ  ಈ ಬಾರಿ  ಸರ್ಕಾರವನ್ನು ನಾವೇ ರಚಿಸುತ್ತೇವೆ ಎಂದು ಎದೆ ತಟ್ಟಿ ಹೇಳುವ ತಾಕತ್ತು ಇದೆ.  ಆದರೆ ಸಂವಿಧಾನ ಜಾರಿಯದಾಗಿನಿಂದಲೂ ಈ ನಾಡಿನಲ್ಲಿ  55 ಜನ ದಲಿತ ನಾಯಕರು ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ ಆದರೆ ಒಬ್ಬರಿಗೂ ಸರ್ಕಾರವನ್ನು ನಾವೇ ರಚಿಸುತ್ತೇವೆ ಎನ್ನುವ ತಾಕತ್ತು ಮಾತ್ರ ಇಲ್ಲವಾಗಿದೆ.  ಹಾಗಾದರೆ ಇವರುಗಳು ಯಾರಿಗಾಗಿ ಗೆದ್ದು ಅಧಿಕಾರದ ಗದ್ದುಗೆ ಏರುತ್ತಿದ್ದಾರೆ ? ಇದರ ಬಗ್ಗೆ ನಮ್ಮವರು ಚಿಂತಿಸಬೇಕಲ್ಲವೇ ?

ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ  BJP ಯಿಂದ ಸುಮಾರು  306 ಮಂದಿ ಗೆದ್ದಿದ್ದರು,  ಸರ್ಕಾರ ರಚಿಸಲು  271 MP ಗಳಿದ್ದರೆ ಸಾಕಾಗಿತ್ತು.  ಈ ಗೆದ್ದವರಲ್ಲಿ ಸುಮಾರು 79 ಮಂದಿ ಮೀಸಲು ಕ್ಷೇತ್ರದ ನಾಯಕರು BJP ಒಂದೇ ಪಕ್ಷದಿಂದಲೇ ಗೆದ್ದಿದ್ದರು.  ಇವರು ಯಾಕೆ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾದ್ಯವಾಗಲಿಲ್ಲ. ಇವರೆಲ್ಲಾ ಒಂದಾಗಿ  ಸರ್ಕಾರ ನಾವೇ ರಚಿಸುತ್ತೇವೆ ಎಂದು  ಒಂದು ವೇಳೆ  ಹೇಳಿದಿದ್ದರೆ,  ನರೇಂದ್ರ ಮೋದಿಯು ಪ್ರಧಾನಿಯಾಗುವ ಅವಕಾಶವಿರಲಿಲ್ಲ,  ಒಮ್ಮೆ BJP ಯವರು  ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದೆ ಆಗಿದಿದ್ದರೆ ಈ 79 ಮಂದಿ ಮೀಸಲು ಕ್ಷೇತ್ರದ ನಾಯಕರು  ಹೊರಗಡೆ ಬಂದಿದ್ದರೆ  ಇಡೀ ಸರ್ಕಾರವೇ ಬುಡಮೇಲಾಗುತ್ತಿತ್ತು.  ಆದರೂ ಇವರು ಅದನ್ನು ಮಾಡಲು ಸಾಧ್ಯವಾಗಲಿಲ್ಲಾ ಯಾಕೆ ? ಇವರೆಲ್ಲಾ  ಅಧಿಕಾರದ ಆಸೆಗಾಗಿ ಬದುಕುವವರೇ ಹೊರತು ಜನಾಂಗದ ಹಿತದೃಷ್ಠಿ ಇವರಿಗೆ ಬೇಕಾಗಿರಲಿಲ್ಲ !!!

ಈಗ ಹೇಳಿ  ನಮಗೆ ಮೊದಲು ಅಧಿಕಾರ ಬೇಕೋ  ಅಥವಾ  ಒಳಮೀಸಲಾತಿಯೇ ಬೇಕೋ ?  ಒಳಮೀಸಲಾತಿ ಬೇಕು ಎನ್ನುವುದಾದರೆ  ನೀವು ಇವತ್ತಿಗೂ  ಬೇರೆಯವರ ಹಂಗಲ್ಲಿ ಬದುಕಿ ಅವರ ಬಳಿ ಭಿಕ್ಷೆ ಬೇಡಬೇಕೆ ಹೊರತು, ಯಥಾವತ್ತಾಗಿ ಜಾರಿಯಾಗಲು ಸಾಧ್ಯವೇ ಇಲ್ಲದ ಮಾತು. ಒಂದು ವೇಳೆ ಮೀಸಲಾತಿ ಎನ್ನುವುದು ಎಲ್ಲ ಕಾಲಕ್ಕೂ  ಸರಿಯಾಗಿ ಜಾರಿಯಾಗಿದೆ ಎನ್ನುವುದೇ ಆಗಿದಿದ್ದರೆ ದಲಿತರಲ್ಲಿ ಬಡತನ ರೇಖೆ ಎಷ್ಟಿದೆ  ? ಒಮ್ಮೆ ಯೋಚಿಸಿ, ಎಷ್ಟು IAS, IPS,  IFS,  ಅಧಿಕಾರಿಗಳು  ಸರ್ಕಾರದ ಅಧೀನ ಕಾರ್ಯದರ್ಶಿಗಳಾಗಿದ್ದಾರೆ IIM ಗಳಲ್ಲಿ  ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ,  ಎಷ್ಟು ದಲಿತರು  ಹೈ ಕೋರ್ಟ್ – ಸುಪ್ರೀಂ ಕೋರ್ಟ್ ಜಡ್ಜ್ ಗಳಾಗಿದ್ದಾರೆ ತಿಳಿಯಿರಿ.  ಜಡ್ಜ್ ಗಳೆಲ್ಲರೂ  ಮನುವಾದಿಗಳೇ ಆಗಿರುವುದರಿಂದ  ದಲಿತರ ಒಟ್ಟಾಗುವಿಕೆಯನ್ನು ಸಹಿಸದೆ  ಒಳಮೀಸಲಾತಿಯ ಬಗ್ಗೆ ಒಂದು ಹೊಸ ಅಲೆಯನ್ನು ಎಬ್ಬಿಸಿ ,  ದಲಿತರನ್ನು ಹೊಡೆದು,  ಅವರನ್ನು ಒಂದಾಗದಂತೆ ನೋಡಿಕೊಳ್ಳಲು ಬಳಸುತ್ತಿರುವ ಒಂದು ತಂತ್ರಗಾರಿಕೆ ಎನ್ನಬಹುದು.

ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ನರಮೇಧಕ್ಕೆ ಕೊನೆಯೇ ಇಲ್ಲ. ರಾಯಚೂರಿನ  ನ್ಯಾಯಾಧೀಶರೇ ಬಾಬಾಸಾಹೇಬರ ಭಾವಚಿತ್ರವನ್ನು ತೆಗೆಸಿ ಅಪಮಾನ ಮಾಡಿದಾಗ ಲಕ್ಷಂತಾರ ದಲಿತರು ಬೆಂಗಳೂರಿನಲ್ಲಿ ಪ್ರತಿಭಟಿಸಿದರು ಇವುಗಳು ಯಾವ ಮನುವಾದಿ ಮೀಡಿಯಾಗಳಿಗೂ,  ಪತ್ರಿಕೆಗಳಿಗೂ ಕಾಣಲಿಲ್ಲಾ ,  ಆದರೆ ಒಳಮೀಸಲಾತಿ ಜಾರಿಯಾಗಬೇಕು ಅದರ ಬಗ್ಗೆ ಚರ್ಚೆಯಾಗಬೇಕು ಎಂದು ದಿನನಿತ್ಯ ಅದರ ಬಗ್ಗೆ ಬರೆಯುವವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದರೆ ಇವರ ನಿಜವಾದ ಉದ್ದೇಶ ಏನು ಎನ್ನುವುದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಇವತ್ತಿನ ದಲಿತ ನಾಯಕರಲ್ಲಿಯೂ ಸಹ ಬಾಬಾಸಾಹೇಬರು ಕೇವಲ ಬೀದಿಗಿಳಿದು ಹೊರಡುವ ರೂಪದಲ್ಲಿದ್ದಾರೆಯೇ ಹೊರತು ,  ಮೆಮೊರೆಂಡಮ್ ನೀಡುವಲ್ಲಿಯೇ ಇದ್ದಾರೆಯೇ ಹೊರತು,  ಕುರ್ಚಿ ನಮ್ಮದು,  ರಾಜ್ಯ ನಮ್ಮದು ,  ಅಧಿಕಾರವು ನಮ್ಮದೇ ಎನ್ನುವ ಯಾವ ಒಬ್ಬ ನಾಯಕನಲ್ಲಿಯೂ  ಇದು ಇವತ್ತಿಗೂ  ಬರಲಿಲ್ಲವಾಗಿದೆ.  ಇದೆ  ಅಂದಿನ ಬಾಬಾಸಾಹೇಬರ ಸಮಾನತೆಯ ಚಳುವಳಿ,  ಇಂದಿನ  ದಲಿತ ನಾಯಕರ  ಅಧಿಕಾರದ ಚಳುವಳಿಗಿರುವ ಮುಖ್ಯ ವ್ಯತ್ಯಾಸ.  ಬಾಬಾಸಾಹೆಬರು ಎಂದು ಎಲ್ಲಿಯೂ ತನ್ನ ಸಿದ್ದಾಂತವನ್ನು ಮಾರಿಕೊಂಡವರಲ್ಲ,  ತನ್ನ ಛಲವನ್ನು  ಬಿಡಲೂ ಇಲ್ಲಾ. ಆದರೆ ಇಂದು ತಮ್ಮಗಳ ಆಸೆಗಾಗಿ ದಲಿತ ಎನ್ನುವ ದೊಡ್ಡ ಅಣೆಪಟ್ಟಿಯ ಮೂಲಕ ಮೀಸಲುಕ್ಷೇತ್ರದಿದ ಆರಿಸಿದವರು, ಅಧಿಕಾರಕ್ಕೆ ಏರಿದಾಕ್ಷಣವೇ ಅಷ್ಟಕ್ಕೇ ಸೀಮಿತವಾಗಿಬಿಡುತ್ತಾರೆ.  ಇದೆ ಕಾರಣದಿಂದಲೇ ಬಾಬಾಸಾಹೇಬರು ನನ್ನ ಸಂವಿಧಾನ ಎಲ್ಲರಿಗು ಸಮಾನತೆಯನ್ನು ನೀಡುವುದಾಗಿದೆ.  ಆದರೆ ಅದನ್ನು ಜಾರಿಮಾಡುವ ಜಾಗದಲ್ಲಿ ಸಂವಿಧಾನದ ವಿರೋಧಿಗಳು ಕುಳಿತಿದ್ದಾರೆ.  ಆದ್ದರಿಂದ ಅದು ಯಥಾವತ್ತಾಗಿ ಜಾರಿಯಾಗುತ್ತದೆ ಎನ್ನುವ ನಂಬಿಕೆ ನನಗೆ ಇಲ್ಲ ಎಂದಿದ್ದರು. ಈಗಲೂ ಅದು ಸತ್ಯವಾಗಿದೆ.

ಸಂವಿಧಾನದ ವಿರೋಧಿಗಳು ಮನುವಾದಿಗಳಲ್ಲಾ,  ಮೀಸಲು ಕ್ಷೇತ್ರದಿಂದ ಗೆದ್ದು  ಆಯ್ಕೆಯಾದ ನಮ್ಮ ನಾಯಕರುಗಳೇ ಇರಬಹುದು ಎನ್ನುವ ಅನುಮಾನಗಳು  ಪ್ರಾರಂಭವಾಗಿಬಿಡುತ್ತವೆ.  ಏಕೆಂದರೆ ಇವರು ಈ ಜನಾಂಗದ ಉದ್ದಾರಕ್ಕಾಗಿ ಆಯ್ಕೆಯಾದವರು.  ಆದರೂ ಈ ದೇಶದಲ್ಲಿ  ಇನ್ನು ಹೆಣವನ್ನು ಹೆಗಲಮೇಲೆ ಸಾಗಿಸುವ,  ದಲಿತ ಹುಡುಗಿ ಸವರ್ಣೀಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಹುಡುಗಿಗೆ ಬಟ್ಟೆ ಬಿಚ್ಚಿ ಹೊಡೆದು ಮೆರವಣಿಗೆ ಮಾಡಿದ್ದು,  ದಲಿತರು ದೇವರ ತಟ್ಟೆ ಮುಟ್ಟಿದ್ದಕ್ಕೆ  ದಂಡ ವಿಧಿಸಿದ್ದು, ಅಲ್ಲಲ್ಲಿ ದಲಿತರ ಸಜೀವ ದಹನ, ಎಲ್ಲವು ಇವತ್ತಿಗೂ ಜಾರಿಯಲ್ಲಿರುವಾಗ,  ಸಂವಿಧಾನ ಜಾರಿಯಾಗಿದೆ ಎಂದು ಹೇಗೆ ಹೇಳಲು ಸಾಧ್ಯವಾಗುತ್ತದೆ.  ಸಂವಿಧಾನದ ಆಶಯಗಳೇ ಜಾರಿಯಾಗದಿದ್ದ ಮೇಲೆ ಇನ್ನು ಒಳ ಮೀಸಲಾತಿ ಎನ್ನುವುದು ಹೇಗೆ ಜಾರಿಯಾಗಲು ಸಾಧ್ಯ ಇದು, ಒಂದು ರೀತಿಯಲ್ಲಿ ದಲಿತರನ್ನು ದಿಕ್ಕು ತಪ್ಪಿಸಿ ಮತ್ತೆ ಬಲಿಷ್ಠ ಜನಾಂಗವು ಅಧಿಕಾರ ಎನ್ನುವ ಗದ್ದುಗೆಯಲ್ಲಿ  ಮುಂದುವರೆಯಲು ಮಾಡಿರುವ ಹುನ್ನಾರಗಳಷ್ಟೇ  ಎಂದರು ತಪ್ಪಾಗಲಾರದು.

ಒಳ ಮೀಸಲಾತಿ ಎನ್ನುವುದು ದಲಿತರ ಒಳಗಿರುವ ಒಂದು ಮಾನಸಿಕ ವ್ಯಸ್ಥೆಯಾಗಿದ್ದು, ಸಂವಿಧಾನದ ಮೂಲ ಆಶಯಗಳನ್ನು ಕುರಿತಿ ದಲಿತರು ಮಾತನಾಡುವುದನ್ನು ದಿಕ್ಕುತಪ್ಪಿಸುವುದಾಗಿದೆ.  ಸಂವಿಧಾನದ  ಉಳಿವಿಗಾಗಿ ಒಂದಾದ ಇಡೀ ಶೋಷಿತ ಸಮುದಾಯವನ್ನು  ಮತ್ತೆ ಒಳಮೀಸಲಾತಿಯ ಹೆಸರಿನಲ್ಲಿ  ಛಿದ್ರಗೊಳಿಸುವ ಹುನ್ನಾರವಾಗಿದೆ. ಬಂಧುಗಳೇ ,  ಮೊದಲು ಸಂವಿಧಾನದ ಉಳಿವಿಗಾಗಿ ಒಂದಾಗೋಣ,  ಬಾಬಾಸಾಹೇಬರ ಎಳೆದು ತಂದ ದಲಿತರ / ಶೋಷಿತರ ವಿಮೋಚನೆಯ ರಥವನ್ನು ಮುಂದಕ್ಕೆ ಎಳೆಯೋಣ ! ಒಳಮೀಸಲಾತಿ ಎನ್ನುವ ಮಾನಸಿಕ ಜಗಳಗಳಿಂದ ದೂರವಿರೋಣ.  ಮೊದಲು ಸಂವಿಧಾನದ ಉಳಿವಿಗಾಗಿ ಒಂದಾಗೋಣ .  ನಂತರ ಒಳಮೀಸಲಾತಿಯ ಮಾತುಗಳು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ