ಮದ್ರಸದಲ್ಲಿ ಮಲಗುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ | ಅಷ್ಟಕ್ಕೂ ಈ ಕೃತ್ಯ ನಡೆಸಿದವರು ಯಾರು ಗೊತ್ತಾ? - Mahanayaka

ಮದ್ರಸದಲ್ಲಿ ಮಲಗುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ | ಅಷ್ಟಕ್ಕೂ ಈ ಕೃತ್ಯ ನಡೆಸಿದವರು ಯಾರು ಗೊತ್ತಾ?

24/12/2020

  • ಕೋಗಲೂರು ಕುಮಾರ್

ದಾವಣಗೆರೆ:  ಹಣಕ್ಕಾಗಿ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ  ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದ್ದು, ಘಟನೆ ನಡೆದು 48 ಗಂಟೆಗಳೊಳಗೆ ಹೊನ್ನಾಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನಜೀರ್ ಅಹ್ಮದ್ ಎಂಬವರು ಹತ್ಯೆಗೀಡಾದವರಾಗಿದ್ದಾರೆ.  ಗ್ರಾಮದ ಮದ್ರಸ ಬಳಿಯಲ್ಲಿ ಇವರನ್ನು  ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಡಿಸೆಂಬರ್ 20ರಂದು ಹತ್ಯೆಗೀಡಾದ ನಜೀರ್ ಅಹ್ಮದ್ ಅವರ ತಮ್ಮ ಮಹಮ್ಮದ್ ಜಿಕ್ರಿಯಾ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾತ ಐಪಿಎಸ್ ಹಾಗೂ ಚನ್ನಗಿರಿ ಪೊಲೀಸ್ ಉಪಾಧೀಕ್ಷಕರಾದ ಪ್ರಶಾಂತ್ ಜಿ. ಮುನ್ನೂಳಿ ಇವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ವಿ.ದೇವರಾಜ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು 48 ಗಂಟೆಗಳೊಳಗೆ ಬಂಧಿಸಲಾಗಿದೆ.

ಹುಣಸಗಟ್ಟ ಗ್ರಾಮದವರೆ ಆಗಿರುವ ಶೋಯೆಬ್ ಅಕ್ತರ್ , ಮುಮ್ತಾಕೀಂ ಬಂಧಿತ ಆರೋಪಿಗಳಾಗಿದ್ದಾರೆ.  ಬಂಧನದ ಬಳಿಕ ಪೊಲೀಸರು ಇವರನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆಗೆ ಕಾರಣ ಏನು ಎಂದು ಬಾಯ್ಬಿಟ್ಟಿದ್ದಾರೆ.

ಇನ್ನೂ ಪ್ರಕರಣದಲ್ಲಿ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಮಹಮದ್ ಜಿಕ್ರಿಯಾ , ಮುಜಾಮಿಲ್ , ಮತ್ತು ಇಕ್ಬಾಲ್ ಎಂಬವರನ್ನೂ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 1.11000 ಸಾವಿರ ರೂ ನಗದು 1 ಚಾಕು,  2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

“ಮೃತ ವ್ಯಕ್ತಿ ನಜೀರ್ ಅಹ್ಮದ್ (50) ಅವಿವಾಹಿತನಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ. ಕೂಲಿ ಮಾಡಿದ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡು ಹುಣುಸಘಟ್ಟ ಗ್ರಾಮದ ಮದ್ರಸದಲ್ಲಿ ಪ್ರತಿನಿತ್ಯ ರಾತ್ರಿ ಮಲಗುತ್ತಿದ್ದ. ಇವನು ತನ್ನ ಚಡ್ಡಿ ಜೇಬಿನಲ್ಲಿ ಹಣ ಇಟ್ಟುಕೊಳ್ಳುತ್ತಿದ್ದದ್ದನ್ನು ಗಮನಿಸಿದ ಆರೋಪಿಗಳು ಹಣಕ್ಕಾಗಿ ಕೊಲೆ ಮಾಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡ ನಮ್ಮ ಪೊಲೀಸರ ತಂಡವು ಮಾನ್ಯ ಎಸ್ಪಿ ಸಾಹೇಬರು ಹಾಗೂ ನಮ್ಮಗಳ ಮಾರ್ಗದರ್ಶನದಲ್ಲಿ ಕೇವಲ  48 ಗಂಟೆಗಳೊಳಗೆ ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪತ್ತೆಯ ತಂಡವನ್ನು ಅಭಿನಂದಿಸಿದ್ದೇವೆ.

-ಪ್ರಶಾಂತ್ ಜಿ .ಮುನ್ನೂಳಿ,  ಪೊಲೀಸ್ ಉಪಾಧೀಕ್ಷಕರು,  ಚನ್ನಗಿರಿ ಉಪವಿಭಾಗ

ಇತ್ತೀಚಿನ ಸುದ್ದಿ