ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: 10,000 ರೂಪಾಯಿಗೆ ಅಪ್ರಾಪ್ತೆಯನ್ನು ಮಾರಿದ್ದ ಮುಖ್ಯ ಆರೋಪಿ ಎನ್’ಕೌಂಟರ್ ನಲ್ಲಿ ಸಾವು!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳು ಹೊರಬರುತ್ತಿದ್ದಂತೆಯೇ, ಪ್ರಕರಣದ ಮುಖ್ಯ ಆರೋಪಿ ಪ್ರಭಾಸ್ ಮೊಂಡಲ್ ಬುಧವಾರ ಮುಂಜಾನೆ ಪೊಲೀಸ್ ಎನ್ ಕೌಂಟರ್ನಲ್ಲಿ ಹತನಾಗಿದ್ದಾನೆ.
10,000 ರೂಪಾಯಿಗೆ ಡೀಲ್:
ಪೊಲೀಸ್ ವಿಚಾರಣೆಯ ವೇಳೆ ಮುಖ್ಯ ಆರೋಪಿ ಪ್ರಭಾಸ್ ಮೊಂಡಲ್ ತನ್ನ ಭೀಕರ ಕೃತ್ಯವನ್ನು ಒಪ್ಪಿಕೊಂಡಿದ್ದನು. ಕೇವಲ 10,000 ರೂಪಾಯಿ ಹಣದ ಆಸೆಗಾಗಿ ಆತ 12 ವರ್ಷದ ಬಾಲಕಿಗೆ ಆಮಿಷ ಒಡ್ಡಿ, ಇತರ ಸಹ–ಆರೋಪಿಗಳಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದನು. ಈತನ ಹೇಳಿಕೆಯ ಆಧಾರದ ಮೇಲೆಯೇ ಪೊಲೀಸರು ಕೃತ್ಯ ನಡೆದ ಸ್ಥಳದಿಂದ ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದರು ಮತ್ತು ಉಳಿದ ಮೂವರು ಆರೋಪಿಗಳಾದ ಆನಂದ್ ಸರ್ದಾರ್, ದಿಬಾಕರ್ ಸರ್ದಾರ್ ಮತ್ತು ಕಬೀರ್ ಮುಲ್ಲಾನನ್ನು ಬಂಧಿಸಲು ಸಾಧ್ಯವಾಗಿತ್ತು.
ಎನ್ ಕೌಂಟರ್ ನಡೆದದ್ದು ಹೇಗೆ?
ಬುಧವಾರ ಮುಂಜಾನೆ ಸೂರ್ಯಪುರ ಎಂಬಲ್ಲಿ ಪೊಲೀಸರು ಆರೋಪಿ ಪ್ರಭಾಸ್ ಮೊಂಡಲ್ ನನ್ನು ಕೃತ್ಯ ನಡೆದ ಸ್ಥಳದ ಮರುಸೃಷ್ಟಿಗೆ (Crime scene reconstruction) ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಯು ಪೊಲೀಸರ ಕಾವಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶನಿವಾರ ಸಂಜೆ ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನೀಲಿ ಟಿ–ಶರ್ಟ್ ಮತ್ತು ಕೆಂಪು ಟೋಪಿ ಧರಿಸಿದ್ದ ಪ್ರಭಾಸ್ ಮೊಂಡಲ್ ಜೊತೆಗೆ ಬಾಲಕಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಇದರ ಆಧಾರದ ಮೇಲೆ ಸ್ಥಳೀಯರು ಆತನನ್ನು ಗುರುತಿಸಿ ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರ ವಿಚಾರಣೆಯ ನಂತರ, ಬಾಲಕಿಯ ಮೃತದೇಹವನ್ನು ಚೀಲದಲ್ಲಿ ತುಂಬಿ ಕೆರೆಗೆ ಎಸೆದಿರುವುದು ಪತ್ತೆಯಾಗಿತ್ತು.
ಆರೋಪಿ ಪ್ರಭಾಸ್ ಮೊಂಡಲ್ ಈ ಹಿಂದೆ ಹಲವು ಅಕ್ರಮ ಚಟುವಟಿಕೆಗಳು ಹಾಗೂ ಮಾದಕ ದ್ರವ್ಯ ವ್ಯಸನದ ಇತಿಹಾಸ ಹೊಂದಿದ್ದ ಎನ್ನಲಾಗಿದೆ. ಮುಖ್ಯ ಆರೋಪಿ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದರೂ, ತನಿಖಾ ಸಂಸ್ಥೆಯಾದ ಎಸ್ ಐಟಿ (SIT) ಈ ಪ್ರಕರಣದ ತನಿಖೆಯನ್ನು ಮುಂದುವರಿಸಲಿದ್ದು, ಉಳಿದ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























