ಜೂನ್​ 1ರಿಂದ ಮಂಗಳೂರು-ಬೆಂಗಳೂರು ಹಗಲು ರೈಲುಗಳು ರದ್ದು: ಕಾರಣ ಏನು? - Mahanayaka

ಜೂನ್​ 1ರಿಂದ ಮಂಗಳೂರು–ಬೆಂಗಳೂರು ಹಗಲು ರೈಲುಗಳು ರದ್ದು: ಕಾರಣ ಏನು?

train
17/05/2025

ಬೆಂಗಳೂರು: ಸಕಲೇಶಪುರ–ಸುಬ್ರಹ್ಮಣ್ಯ ರೋಡ್​ ಸೆಕ್ಷನ್​ ಮಧ್ಯೆ ರೈಲು ಮಾರ್ಗದ ವಿದ್ಯುದ್ದೀಕರಣ (ಆರ್‌ಇ) ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ನಡುವೆ ಜೂ.1ರಿಂದ ನ.1ರ ವರೆಗೆ ಸುಮಾರು 154 ದಿನಗಳ ಕಾಲ ಹಗಲು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಮೇ 31 ರಿಂದ ನವೆಂಬರ್ 1 ರವರೆಗೆ ಪ್ರತಿ ಶನಿವಾರದಂದು ಸಂಚರಿಸುವ ಯಶವಂತಪುರ ಟು ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದಾಗಲಿದೆ. ಅದೇ ರೀತಿ, ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರದಂದು ಸಂಚರಿಸುವ ಮಂಗಳೂರು ಜಂಕ್ಷನ್ ಟು ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ಸಂಚಾರ ರದ್ದಾಗಲಿದೆ.

ಇದಲ್ಲದೆ, ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಯಶವಂತಪುರ ಟು ಕಾರವಾರ ಟ್ರೈ–ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ಹಾಗೂ ಜೂನ್ 3ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸುವ ಕಾರವಾರ ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ಸಹ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ತಿಳಿಸಿದೆ.

ಗೊಮ್ಮಟೇಶ್ವರ ಎಕ್ಸ್‌ ಪ್ರೆಸ್‌, ಕಾರವಾರ ಎಕ್ಸ್‌ ಪ್ರೆಸ್‌, ಮಂಗಳೂರು ಸೆಂಟ್ರಲ್‌ ವಾರದ ವಿಶೇಷ ಎಕ್ಸ್‌ಪ್ರೆಸ್‌ ಮುಂದಿನ 5 ತಿಂಗಳು ರದ್ದಾಗಲಿವೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ 12 ರೈಲುಗಳ ಪೈಕಿ 6 ರೈಲುಗಳು ಸಂಪೂರ್ಣ ರದ್ದಾಗುತ್ತಿವೆ. ಈ ಮೂಲಕ ಪ್ರಯಾಣಿಕರು ಬದಲಿ ಮಾರ್ಗ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ