ಪ್ರಧಾನಿ ನೇತನ್ಯಾಹು ಸರಕಾರದ ವಿರುದ್ಧವೇ ಇಸ್ರೇಲ್ ನಲ್ಲಿ ಭಾರೀ ಪ್ರತಿಭಟನೆ
ಇಸ್ರೇಲ್ ಪ್ರಧಾನಿ ನೇತನ್ಯಾಹು ಸರಕಾರದ ವಿರುದ್ಧ ಇಸ್ರೇಲ್ ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇಸ್ರೇಲ್ ನ ಅತಿ ದೊಡ್ಡ ಕಾರ್ಮಿಕ ಸಂಘಟನೆ ಯಾಗಿರುವ ಹಿಸ್ತ್ರಡಿಯ ನೇತೃತ್ವದಲ್ಲಿ ದೇಶ ವ್ಯಾಪಿ ಸಾರ್ವಜನಿಕ ಕೆಲಸ ಸ್ಥಗಿತಕ್ಕೆ ಚಾಲನೆ ನೀಡಲಾಗಿದ್ದು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಕ್ಕಾಗಿ ಕದನ ವಿರಾಮ ಏರ್ಪಡಿಸುವಂತೆ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಇದೇ ವೇಳೆ ಕಾರ್ಮಿಕ ಸಂಘಟನೆಯ ಕೆಲಸ ಸ್ಥಗಿತ ಪ್ರತಿಭಟನಾ ಕರೆಗೆ ವಿರೋಧ ಪಕ್ಷದ ಮುಖಂಡ ಯಾಯಿಡ್ ಲಾಪಿಡ್ ಬೆಂಬಲ ನೀಡಿದ್ದಾರೆ.
ಗಾಝಾ ವಿರೋಧಿ ದಾಳಿಯ ವಿಷಯದಲ್ಲಿ ನೆತನ್ಯಾಹು ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿರುವಂತೆಯೇ ಹಮಾಸ್ ವಶದಲ್ಲಿದ್ದ ಆರು ಮಂದಿ ಒತ್ತೆಯಾಳುಗಳ ಸಾವಿನ ಸುದ್ದಿ ಬಹಿರಂಗವಾಗಿದೆ. ಇನ್ನು ಉಳಿದಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಕ್ಕಾದರೂ ನೆತನ್ಯಾಹು ಸರಕಾರ ತಕ್ಷಣ ಕದನ ವಿರಾಮಕ್ಕೆ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿ ರಾಜಧಾನಿಯಲ್ಲಿ ಹಲವು ಪ್ರತಿಭಟನೆಗಳು ನಡೆದಿದೆ.
ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಅನೇಕರಿಗೆ ಗಾಯಗಳಾಗಿವೆ. ಅನೇಕ ಕಡೆ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಕೆಲಸ ಸ್ಥಗಿತ ಪ್ರತಿಭಟನೆಯು ವಿಮಾನ ಸರ್ವಿಸ್ ನ ಮೇಲೂ ಪ್ರಭಾವ ಬೀರಿದೆ. ವಿವಿಧ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth