ಮೂಡುಬಿದಿರೆ: ಸೆ.26ರಿಂದ ಕಂಬಳ ಓಟಗಾರರಿಗೆ 7ನೇ ವರ್ಷದ ತರಬೇತಿ ಶಿಬಿರ ಆರಂಭ
ಮೂಡುಬಿದಿರೆ: ಕಂಬಳ ಕ್ರೀಡೆಯ ಸಂರಕ್ಷಣೆ, ನಿರ್ವಹಣೆ ಮತ್ತು ಮುಂದಿನ ಪೀಳಿಗೆಗೆ ತರಬೇತಿ ನೀಡುವ ಸದುದ್ದೇಶದಿಂದ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ಮಿಯಾರು, ಕಾರ್ಕಳ) ವತಿಯಿಂದ ಕಡಲಕೆಯ ಸೃಷ್ಟಿ ಗಾರ್ಡನ್ ನಲ್ಲಿ ಸೆಪ್ಟೆಂಬರ್ 26ರಿಂದ ಹತ್ತು ದಿನಗಳ ಕಾಲ 7ನೇ ವರ್ಷದ ಕಂಬಳ ತರಬೇತಿ ಶಿಬಿರ ನಡೆಯಲಿದೆ ಎಂದು ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011ರಲ್ಲಿ 11 ಜನ ಸಮಾನ ಮನಸ್ಕ ಕೃಷಿಕರು ಸೇರಿಕೊಂಡು ಶಿರಾಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈ ಅಕಾಡೆಮಿಯನ್ನು ಆರಂಭಿಸಿದ್ದರು. ಮಿಯಾರಿನಲ್ಲಿ 5 ವರ್ಷ ತರಬೇತಿ ಶಿಬಿರಗಳು ನಡೆದಿದ್ದು, ಪ್ರಸ್ತುತ ಮೂಡುಬಿದಿರೆಯ ಕಡಲಕೆಯಲ್ಲಿ ಎರಡನೇ ವರ್ಷದ ಶಿಬಿರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೆ.12ರಂದು ಮೊದಲ ಸುತ್ತಿನ ಆಯ್ಕೆ ನಡೆಯಲಿದ್ದು, ರಾಷ್ಟ್ರೀಯ ತರಬೇತುದಾರರು ಎರಡನೇ ಸುತ್ತಿನಲ್ಲಿ ಅಂತಿಮವಾಗಿ 40 ಮಂದಿ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದವರಿಗೆ ಸೆ.26ರಿಂದ 10 ದಿನಗಳ ಕಾಲ ಕಂಬಳ ಕ್ಷೇತ್ರದ ಅನುಭವಿ ತಜ್ಞರಿಂದ ಕೋಣಗಳನ್ನು ಓಡಿಸುವುದು, ಕೋಣಗಳ ವೈಜ್ಞಾನಿಕ ಸಾಕಣೆ ಕುರಿತು ತರಬೇತಿ ನೀಡಲಾಗುತ್ತದೆ. ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಮಾನಸಿಕ ತಜ್ಞರಿಂದ ವಿಶೇಷ ಉಪನ್ಯಾಸ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಜರುಗಲಿವೆ.
ಮಹಿಳೆಯರಿಗೆ ವಿಶೇಷ ಒತ್ತು:
ಕಂಬಳ ಕ್ಷೇತ್ರಕ್ಕೆ ಹೆಚ್ಚಿನ ಮಹಿಳೆಯರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರಿಗೆ ತೀರ್ಪುಗಾರರು (Referees) ಹಾಗೂ ಉದ್ಯೂಪಕರಾಗಿ ಕಾರ್ಯನಿರ್ವಹಿಸುವ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ 18 ವರ್ಷ ಮೇಲ್ಪಟ್ಟ ಆಸಕ್ತರು ಸ್ಥಳದಲ್ಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಮೊದಲ ಬ್ಯಾಚ್ ನ ಪ್ರಸಿದ್ಧ ಓಟಗಾರ ಶ್ರೀನಿವಾಸ ಗೌಡ ಹಾಗೂ ಎರಡನೇ ಬ್ಯಾಚ್ ನ ಓಟಗಾರ ಪಣಪಿಲ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























