ಮೂಡುಬಿದಿರೆ: ವಿದ್ಯುತ್ ಆಘಾತಕ್ಕೆ ತಾಯಿ-ಮಗ ದಾರುಣ ಸಾವು - Mahanayaka

ಮೂಡುಬಿದಿರೆ: ವಿದ್ಯುತ್ ಆಘಾತಕ್ಕೆ ತಾಯಿ–ಮಗ ದಾರುಣ ಸಾವು

mudubidire
22/10/2026

ಮೂಡುಬಿದಿರೆ: ಬಟ್ಟೆ ಒಣಹಾಕುವ ವೇಳೆ ಸಂಭವಿಸಿದ ಆಘಾತಕಾರಿ ವಿದ್ಯುತ್ ಅವಘಡದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಹೋಲಿ ರೋಸರಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶೋನ್ ಮಸ್ಕರೇನಸ್ ಅವರು, ಮನೆಯ ಬಳಿ ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.

ಬಟ್ಟೆ ಒಣಹಾಕುತ್ತಿದ್ದ ವೇಳೆ ಶೋನ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡುತ್ತಿರುವುದನ್ನು ಗಮನಿಸಿದ ತಾಯಿ ಮರ್ಸಿ ಮಸ್ಕರೇನಸ್, ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರಿಗೂ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಿಗ್ಗೆ ಸುಮಾರು 7ರಿಂದ 8ರ ಸುಮಾರಿಗೆ ತೋಟದ ಕೆಲಸಕ್ಕೆಂದು ಕಾರ್ಮಿಕರೊಬ್ಬರು ಮರ್ಸಿಯವರ ಮನೆ ಬಳಿ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler