ಅಮಾನವೀಯ ಘಟನೆ: ಅಪ್ರಾಪ್ತ ಬಾಲಕ- ಬಾಲಕಿಯನ್ನು ತಡೆದು ಬಾಲಕಿಗೆ ಲೈಂಗಿಕ ಕಿರುಕುಳ: ಮೂವರ ಬಂಧನ, ನಾಲ್ವರಿಗಾಗಿ ಶೋಧ - Mahanayaka
10:29 AM Tuesday 10 - November 2026

ಅಮಾನವೀಯ ಘಟನೆ: ಅಪ್ರಾಪ್ತ ಬಾಲಕ– ಬಾಲಕಿಯನ್ನು ತಡೆದು ಬಾಲಕಿಗೆ ಲೈಂಗಿಕ ಕಿರುಕುಳ: ಮೂವರ ಬಂಧನ, ನಾಲ್ವರಿಗಾಗಿ ಶೋಧ

jamui bihar
21/09/2026

ಪಾಟ್ನಾ / ನವದೆಹಲಿ: ಬಿಹಾರದ ಜಮುಯಿ (Jamui) ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ಮೇಲೆ ರಸ್ತೆಬದಿಯಲ್ಲಿ ಗುಂಪೊಂದು ದೌರ್ಜನ್ಯ ಹಾಗೂ ಕಿರುಕುಳ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಮುಯಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಒಂದೇ ಕೋಚಿಂಗ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಸ್ನೇಹಿತರಾದ ಬಾಲಕ ಮತ್ತು ಬಾಲಕಿಯನ್ನು ಸೆಪ್ಟೆಂಬರ್ 19ರ ಸಂಜೆ ಕೆಲ ಕಿಡಿಗೇಡಿಗಳು ರಸ್ತೆಯಲ್ಲಿ ತಡೆದು ನಿಂದಿಸಿದ್ದಾರೆ ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಘಟನೆ ನಡೆದ ತಕ್ಷಣ ಸಂತ್ರಸ್ತರು ದೂರು ನೀಡಿರಲಿಲ್ಲ. ಆದರೆ ಸೆಪ್ಟೆಂಬರ್ 21ರಂದು ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ, ವೀಡಿಯೊದಲ್ಲಿದ್ದ ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಸಂತ್ರಸ್ತರನ್ನು ಪತ್ತೆ ಹಚ್ಚಿದ್ದಾರೆ.

ಜಮುಯಿ ಎಸ್‌ ಪಿ ಬಿಶ್ವಾಜಿತ್ ದಯಾಳ್ ಅವರ ಸೂಚನೆಯಂತೆ, ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ದೀಪ್ತಿ ಮೊನಾಲಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಸದ್ಯ ವೈರಲ್ ವೀಡಿಯೊದ ಆಧಾರದ ಮೇಲೆ ಪೊಲೀಸರು ಒಟ್ಟು 7 ಜನ ಆರೋಪಿಗಳನ್ನು ಗುರುತಿಸಿದ್ದಾರೆ.

ಗುರುತಿಸಲಾದ 7 ಜನರಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ವೀಡಿಯೊದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಪ್ರಮುಖ ಆರೋಪಿ ಸೇರಿದಂತೆ ಉಳಿದ ನಾಲ್ವರ ಬಂಧನಕ್ಕೆ ಪೊಲೀಸರು ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸಂತ್ರಸ್ತರ ಗೌಪ್ಯತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳಿಂದ ಈ ವೈರಲ್ ವೀಡಿಯೊವನ್ನು ತೆಗೆದುಹಾಕಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.  ಘಟನೆಯ ವೀಡಿಯೊ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಘಟನೆಯನ್ನು “ತೀವ್ರ ಆತಂಕಕಾರಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗವು (NCW) ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದು, ಆರೋಪಿಗಳ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮಕ್ಕೆ ಬಿಹಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler