ಬಾಬಾ ಸಾಹೇಬರ ಪರಿನಿಬ್ಬಾಣ  - ಬಹುಜನರ ಐಕ್ಯತಾ ದಿನ - Mahanayaka
6:43 AM Thursday 12 - December 2024

ಬಾಬಾ ಸಾಹೇಬರ ಪರಿನಿಬ್ಬಾಣ  — ಬಹುಜನರ ಐಕ್ಯತಾ ದಿನ

dammapriya
06/12/2022

ನವ ಭಾರತದ ಯುವ ಪೀಳಿಗೆಯ ತರುಣರಿಗೆ  ಡಿ.6  ಇಂದು ವಿಶೇಷವಾದ  ದಿನ. ಯಾಕೆ ಎಂದು ಕೇಳಿದರೆ, ಒಂದು ಕೋಮಿನ ಜನರು  ಭಾರತದಲ್ಲಿದ್ದ ಮುಸಲ್ಮಾನರ  ಬಾಬರೀ ಮಸೀದಿಯನ್ನು ಕೆಡವಿದ ದಿನವೆಂದು ಹೇಳುತ್ತಾರೆ. ಆದರೆ, ಬಹುಜನರ, ಶೋಷಿತರ, ಧಾರ್ಮಿಕ ಅಲ್ಪಸಂಖ್ಯಾತರನ್ನು ಸಂವಿಧಾನದ ಆಶಯಗಳು  ಹಕ್ಕುಗಳ ಬಗ್ಗೆ  ಸ್ವಲ್ಪವಾದರು  ಅರಿವಿರುವ ಜನರನ್ನು ಕೇಳಿದಾಗ ಈ ದೇಶದ  ನವಭಾರತದ ನಿರ್ಮಾತೃ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು ನಮ್ಮನ್ನು ಅಗಲಿದ ದಿನವೆಂದು  ಹೇಳುತ್ತಾರೆ. ಜೊತೆಗೆ ಮನದಲ್ಲಿಯೇ ಕಂಬನಿ  ಮಿಡಿಯುತ್ತಾರೆ. ಎಂಥಹ ದೈತ್ಯ ಮನುಷ್ಯ ನಮಗಾಗಿ ಎಷ್ಟೆಲ್ಲಾ  ಕೆಲಸಗಳನ್ನು ಮಾಡಿ ಬಿಟ್ಟು ಹೋಗುತ್ತಿದ್ದಾರೆ  ಎಂದು ಮರುಕ ಪಡುತ್ತಾರೆ. ಇಂತಹ ಮನುಷ್ಯ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಸದಾ  ಹರಸುತ್ತಾರೆ.

ಬಾಬಾಸಾಹೇಬರು ಇಂದಿಗೆ ಪರಿನಿಬ್ಬಾಣಗೊಂಡು  66 ವರ್ಷಗಳು ಕಳೆದವು.  ಬಾಬಾಸಾಹೇಬರ ಆಶಯದಂತೆ “ನನ್ನ ಜನ ಈ ದೇಶವನ್ನಾಳಬೇಕು, ಅದನ್ನು ನಾನು ಕಣ್ಣಾರೆ ಕಾಣಬೇಕು”  ಎನ್ನುವ ಕನಸ್ಸು  ಇನ್ನು ಕನಸ್ಸಾಗಿಯೇ  ಉಳಿದಿದಿಯೇ ಹೊರತು ನನಸ್ಸು ಮಾಡುವಲ್ಲಿ  ಹಲವಾರು ಪ್ರಯತ್ನಗಳು ನಡೆದರೂ  ಕೋಮುವಾದಿಗಳಿಂದ, ಪಟ್ಟಭದ್ರಹಿತಾಶಕ್ತಿಗಳ  ಕುತಂತ್ರದಿಂದ  ಎಲ್ಲೋ ಒಂದು ಕಡೆ ನನಸಾಗದೇ  ಹಾಗೆಯೇ  ಉಳಿಯುತ್ತಿದೆ ಎನ್ನುವ ಆತಂಕ ಭೀಮನ ಮೊಮ್ಮಕ್ಕಳನ್ನು ಕಾಡತೊಡಗಿದೆ.

ಬಾಬಾಸಾಹೇಬರು ಅಂದರೆ ಒಂದು ರೀತಿಯಾ ಸಮಾನತೆ, ಸ್ವಾಭಿಮಾನ, ಸ್ವತಂತ್ರ ಎಲ್ಲದಕ್ಕೂ ಹೆಚ್ಚಾಗಿ ಸುಜ್ಞಾನ ಭಂಡಾರ, ಅಸಮಾನತೆ ಮತ್ತು ಮೌಢ್ಯತೆಯನ್ನು ಮೆಟ್ಟಿನಿಂತ ದಿವ್ಯ ಚೇತನ ಎನ್ನಬಹುದು. ಬಾಬಾಸಾಹೇಬರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಒಬ್ಬ ಸಾಮಾನ್ಯ ಪ್ರಜೆಯಾಗಿರದೆ,  ಒಬ್ಬ ಉತ್ತಮ ವಿದ್ಯಾರ್ಥಿಯಾಗಷ್ಟೇ ಸೀಮಿತಗೊಳ್ಳದೆ ಅದರಿಂದಾಚೆಗೂ  ಮೀರಿ ನಿಂತವರು. ಭಾರತದಲ್ಲಿ  ಜಾರಿಯಿದ್ದ ಜಾತಿ ವ್ಯವಸ್ಥೆಯ ಕರಾಳತೆಯನ್ನು  ಇಂಚು ಇಂಚಾಗಿ  ಅಧ್ಯಯನ ನಡೆಸಿ ಇದಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು  ಪಣತೊಟ್ಟ ಒಬ್ಬ ಮಹಾನಾಯಕ. ಹಂದಿ ನಾಯಿಗಳಿಗಿಂತಲೂ  ನಿಕೃಷ್ಟವಾಗಿ  ನಡೆಸಿಕೊಂಡು  ಈ ದೇಶದ  ಬಹುಜನರನ್ನು  ಗುಲಾಮರನ್ನಾಗಿ ನಡೆಸಿಕೊಂಡಿದ್ದ ಮನುಧರ್ಮ ಶಾಸ್ತ್ರದ  ಬೇರುಗಳನ್ನು ಬುಡ ಸಮೇತ ಕಿತ್ತೊಗೆದ ಮಹಾನ್  ಮೇಧಾವಿ ಬಾಬಾಸಾಹೇಬರು.

ಬಾಬಾಸಾಹೇಬರು  ತನ್ನ ಸುತ್ತಮುತ್ತಲಿನ ನೊಂದ ಜನರ ಧ್ವನಿಯಾಗಿ, ಅವರ ಬದುಕಿಗೆ ಆಶಾಕಿರಣವಾಗಿ ಎಲ್ಲರನ್ನು  ಸ್ವಾಭಿಮಾನದ  ಬೆಳಕಿನ ಕಡೆಗೆ ಮುಖಮಾಡುವಂತೆ ಬದುಕಿ ತೋರಿಸಿಕೊಟ್ಟವರು. ಸಮಾಜದ ದೃಷ್ಟಿಯಲ್ಲಿ  ಮಕ್ಕಳನ್ನು ಹೆರುವ ಯಂತ್ರವಾಗಿ, ಗಂಡನ ಮತ್ತು ಮನೆಯವರ ಸೇವೆಗೆ ಸಿದ್ದವಾಗಿದ್ದ ಹೆಣ್ಣು  ವಿದ್ಯೆಯಲ್ಲಿ,  ಉದ್ಯೋಗದಲ್ಲಿ,  ಆಸ್ತಿಯಲ್ಲಿ , ಎಲ್ಲದರಲ್ಲೂ  ಸಮಾನತೆಯನ್ನು  ಸಾಧಿಸಲು  ಮುಂದಾಗಿದ್ದಾಳೆ  ಎಂದರೆ  ಅದು  ಬಾಬಾಸಾಹೇಬರು  ತನ್ನ ಸಂವಿಧಾನದಲ್ಲಿ ಅಡಕವಾಗಿಸಿರುವ  ಸಮಾನತೆಯ  ಸೂತ್ರಗಳೇ  ಹೊರತು , ಯಾವುದೇ ತಾರತಮ್ಯದ  ಏಳು ಬೀಳಿನ  ಸಮಾಜದ  ಕಠೋರ ನಿಯಮಗಳಲ್ಲಾ  ಎಂಬುದನ್ನು  ತಿಳಿಯಬಹುದಾಗಿದೆ.ಇಂತಹ  ಮಹಾನಾಯಕನ ತ್ಯಾಗದ ಚೇತನವನ್ನು  ನಮ್ಮ ಪ್ರಜ್ಞಾವಂತ ಭಾರತೀಯಾ ಹೆಣ್ಣುಮಕ್ಕಳು  ಎಷ್ಟರ ಮಟ್ಟಿಗೆ ಇಂದು ಸ್ಮರಿಸುತ್ತಿದ್ದಾರೆ  ಎಂದು ಚಿಂತಿಸಬೇಕಾಗಿದೆ.

ಬಾಬಾಸಾಹೇಬರ  ಜ್ಞಾನವನ್ನು  ಅವರ ಸಂವಿಧಾನದ ಕೊಡುಗೆಯನ್ನು  ಸಹಿಸದ  ಮೂಲ ಸನಾತನಿಗಳು  ಬಾಬಾಸಾಹೇಬರನ್ನೇ ಒಂದು ಕೋಮಿನ ಜನಾಂಗದ ನಾಯಕನೆಂದು  ಅಪಪ್ರಚಾರ ಮಾಡುವುದರೊಂದಿಗೆ ಅವರ ನವ ಭಾರತದ ಚಿಂತನೆಗಳನ್ನು ಗೊಂದಲಮಯಗೊಳಿಸಿ ಸಮಾಜಕ್ಕೆ ಉಣಬಡಿಸಲು  ಪ್ರಾರಂಭಿಸಿದ್ದಾರೆ.  ಅಂದಿನ ಬಾಬಾಸಾಹೇಬರ ಘಮ್ಯವಾದ  ಕೊಡುಗೆಯನ್ನು  ಜನರಿಗೆ  ತಲುಪಿಸುವಲ್ಲಿ  ಅಡ್ಡಗೋಡೆಯನ್ನು  ಕಟ್ಟಲಾರಂಭಿಸಿದ್ದಾರೆ. ಇದು ದೇಶದಾದ್ಯಂತ ಹಲವಾರು ವೇದಿಕೆಗಳಲ್ಲಿ  ಹಾಗೆಯೇ ಮುಂದುವರೆಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.

ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಬಾಬಾಸಾಹೇಬರು ಅದೇ ಸಭೆಯಲ್ಲಿ  ಭಾಗವಹಿಸಿದ್ದಾ ಗಾಂಧೀಜಿ ಮತ್ತು ಕಾಂಗ್ರೆಸಿಗರ ಕುತಂತ್ರವನ್ನು ಮನಗಂಡು ಬಹುಜನರಿಗೆ ಸಿಗಬೇಕಾದ ಸವಲತ್ತುಗಳು ಇವರಿಂದಲೇ ವಂಚನೆಯಾಗುತ್ತಿವೆಯೆಂದು ತಿಳಿದರು. ಇದನ್ನು ತಪ್ಪಿಸಬೇಕೆಂದು  ತನ್ನ ಮಗನ ಸಾವಿನ ಸುದ್ದಿ ತಿಳಿದರು ಹೋಗದೆ  ದೇಶದ ಬಹುಜನರಿಗಾಗಿ ಸಭೆಯಲ್ಲಿ ಪಾಲ್ಗೊಂಡು ಯಶಸ್ಸಾದರು.  ಹೆಣ್ಣುಮಕ್ಕಳ ಹಕ್ಕುಗಳು ಜಾರಿಯಾಗಬೇಕು ಇಲ್ಲವಾದಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ನೀಡುವುದಾಗಿ ಪಣತೊಟ್ಟು ನಿಂತರು. ಕೊನೆಗೆ ಮಂತ್ರಿ ಪದವಿಗೆ ರಾಜೀನಾಮೆಯನ್ನು ನೀಡಿದರು. ಇಂತಹ ನಿಸ್ವಾರ್ಥ ಜೀವಿ,ತ್ಯಾಗಜೀವಿ  ಮಹಾನಾಯಕನ ಬಗ್ಗೆ ನಮಗೆಷ್ಟು ಗೊತ್ತಿದೆ ,  ಎಲ್ಲರೂ  ತಮ್ಮನ್ನು ತಾವು ಒಮ್ಮೆ  ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಬಂಧುಗಳೇ  ಬಾಬಾಸಾಹೇಬರನ್ನು  ಕಳೆದುಕೊಂಡ ಬಹುಜನರು ಈ ದೇಶದ ಮಣ್ಣಿನಲ್ಲಿ ಸುಮಾರು  66 ವರ್ಷಗಳನ್ನು ಕಳೆದಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು  75 ವರ್ಷಗಳ  ಸುವರ್ಣ ಸಂಭ್ರಮವನ್ನು ಆಚರಿಸಲಾಗಿದೆ.  ಆದರೆ ಬಾಬಾಸಾಹೇಬರ ಕನಸ್ಸಿನಂತೆ ಬಹುಜನರು  ರಾಜ್ಯಾಧಿಕಾರ,ದೇಶದ  ಆಡಳಿತದ  ಚುಕ್ಕಾಣಿ  ಹಿಡಿಯುವಲ್ಲಿ  ಇನ್ನು  ಪ್ರಯತ್ನದಲ್ಲಿಯೇ ಇದ್ದಾರೆ. ಕಾರಣ ಬಹುಜನರನ್ನು    ಆಳುವ ಸರ್ಕಾರಗಳು  ತಮ್ಮ ಕುಯುಕ್ತಿ ಬುದ್ದಿಯಿಂದ  ತಮ್ಮ ತಮ್ಮ ಪಕ್ಷಗಳ  ಕಾರ್ಯಕರ್ತರುಗಳನ್ನಾಗಿ ಇಟ್ಟುಕೊಂಡಿದೆಯೇ ಹೊರೆತು. ಅಧಿಕಾರದ ಗದ್ದುಗೆಗೆ ಏರಲು ಬಿಟ್ಟಿಲ್ಲಾ.  ಹಾಗೆಂದ ಮಾತ್ರಕ್ಕೆ  ಇವರುಗಳು ಯಾರೂ ಅರ್ಹರಲ್ಲ ಎಂದಲ್ಲಾ ಪಕ್ಷದ ನಿಷ್ಠೆ ಪ್ರಾಮಾಣಿಕತೆ ಇವರನ್ನು ಕಟ್ಟಿಹಾಕಿದೆ.

ಬಾಬಾಸಾಹೇಬರೇ  ಹೇಳುವ ಹಾಗೆ  ಬಹುಜನ ವಿದ್ಯಾವಂತರು  ಉತ್ತಮ ಸಮಾಜ ಪರಿಕಲ್ಪನೆಯ ಕಡೆಗೆ ಚಿಂತಿಸದೆ  ಬೇಜವಾಬ್ದಾರಿಗಳಾಗಿ ಸಮಯವನ್ನು ಹಾಳುಮಾಡುತ್ತಿದ್ದಾರೆ. ವಿದ್ಯಾವಂತ ನೌಕರರು  ತಾನು ಬೆಳೆದು ಬಂದ ಸಮಾಜದಿಂದ ದೂರ ಉಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮೀಸಲು ಕ್ಷೇತ್ರದ ನಾಯಕರು ತಮ್ಮ ತಮ್ಮಗಳ ಸ್ವಾರ್ಥಕ್ಕಾಗಿ  ತಮ್ಮನ್ನು ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡು ಆಳ್ವಿಕೆ ಮಾಡುತ್ತಿದ್ದು ಅಮಾಯಕ ಬಹುಜನರನ್ನು ಇಂದಿಗೂ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.  ಇದು ಬಾಬಾಸಾಹೇಬರ ಅಂತಿಮ ದಿನಗಳ  ಬಹುದೊಡ್ಡ ಯಾತನೆಯಾಗಿತ್ತು  ಅದರ ಕೊರಗಿನಲ್ಲೇ ಪ್ರಕೃತಿಯೊಡನೆ ಲೀನವಾದರು.

ಆದರೆ ಇಂದು ಡಿ 6 ನೇ ದಿನವನ್ನು  ಬಹುಜನರ ಪಾಲಿಗೆ ಕರಾಳ ದಿನವೆಂದು  ಬಾಬಾಸಾಹೇಬರು ನಮ್ಮನ್ನಗಲಿದ ದಿನವೆಂದು  ಭಾಷಣ ಮಾಡಿ  ಅಷ್ಟರಲ್ಲೀಯೇ  ಕೈ ತೊಳೆದುಕೊಂಡು ಸುಮ್ಮನಾಗುತ್ತೇವೆ.  ಬಾಬಾಸಾಹೇಬರು  ತಮ್ಮ ಚಳುವಳಿಯನ್ನು  ಬಹುಜನರಾದ ನಮ್ಮೆಲ್ಲರಿಗೂ ಜವಾಬ್ದಾರಿಕೊಟ್ಟು  ನೀವು ಈ ಚಳುವಳಿ ಮುಂದುವರೆಸಿ ನನ್ನ ಜನರ ಏಳಿಗೆಗಾಗಿ  ದುಡಿಯಿರಿ ಎಂದು  ಹೇಳಿದ ದಿನವೆಂದು ತಿಳಿಸಬೇಕಾಗಿದೆ.  ಈ ದಿನವನ್ನು  ಬಹುಜನರ ಐಕ್ಯತಾ ದಿವಾಸವೆಂದು  ಸಾರಬೇಕಾಗಿದೆ. *ಡಿ 6 ಕರಾಳ ದಿನವಲ್ಲಾ , ಬಾಬಾಸಾಹೇಬರು ತನ್ನ ಚಳುವಳಿಯನ್ನು  ಬಹುಜನರ ಹೆಗಲಿಗೆ ವರ್ಗಾವಣೆ ಮಾಡಿದ ದಿನ* ಎಂದು ಸಾರಬೇಕಾಗಿದೆ. ಅಂತಹ ಸ್ವಾಭಿಮಾನವನ್ನು ಎಲ್ಲರೂ  ಬೆಳೆಸಿಕೊಳ್ಳಬೇಕಾಗಿದೆ. ಇದೇ ದಾರಿಯಲ್ಲಿ  ಚಳುವಳಿಯ ರಥ ಸಾಗಬೇಕಾಗಿದೆ

ತಮಗೆ ಜನುಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯಶೀಲರೇ ಧನ್ಯರು.  ತಮ್ಮ ಜನಾಂಗಕ್ಕೆ ತಗುಲಿರುವ ಗುಲಾಮಗಿರಿಯ  ಸಂಕೋಲೆಗಳನ್ನು ಕಡಿದೊಗೆಯಲು ತಮ್ಮದೆಲ್ಲವನ್ನು ತ್ಯಾಗ ಮಾಡುವವರೇ ಧನ್ಯರು .  ಶೋಷಿತ ಜನಾಂಗವು ಹಕ್ಕು ಅಧಿಕಾರವನ್ನು ಗಳಿಸುವ ತನಕ ಸನ್ಮಾನಕ್ಕೆ ಆಸೆ ಪಡದೆ, ಅಪಮಾನಕ್ಕೆ ಅಂಜದೆ, ಬಿಸಿಲು ಬಿರುಗಾಳಿಯನ್ನು ಲೆಕ್ಕಿಸದೆ ಮುನ್ನಡೆದು ಗುರಿ ಸಾಧಿಸುವವರೇ ಧನ್ಯರು.

ಈ ನಿಟ್ಟಿನಲ್ಲಿ ಬಾಬಾಸಾಹೇಬರ ಆಶಯಗಳಿಗೆ  ಸ್ಪಂದಿಸೋಣ.  ಅವರು ತೋರಿದ ಮಾರ್ಗದಲ್ಲಿ  ನಡೆಯೋಣ, ಡಿ 6ನ್ನು ಬಹುಜನರ ಐಕ್ಯತಾ ದಿನವೆಂದು ತಿಳಿದು ಎಲ್ಲರೂ ಒಂದಾಗೋಣ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ